ಗಂಗಾವತಿ: ಅತ್ಯಂತ ಹಿಂದುಳಿದ ಸಮಾಜದಿಂದ ಬಂದಿರುವ ಮಾಜಿ ಸಚಿವ ಬಿ.ಶ್ರೀರಾಮುಲು, ಸಿರಗುಪ್ಪ ಮಾಜಿ ಶಾಸಕ ಸೋಮಲಿಂಗಪ್ಪ ಇವರನ್ನು ಮೀಸಲು ಇಲ್ಲದ ಸಾಮಾನ್ಯ ಕ್ಷೇತ್ರದಿಂದ ಗೆಲ್ಲಿಸುವುದರೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದ ನಾಯಕರನ್ನಾಗಿ ಮಾಡಿದ ಹೆಮ್ಮೆ ನನಗಿದೆ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದ್ದಾರೆ. ರಾಜ್ಯದಲ್ಲಿ ಎಸ್ಟಿ ಸಮುದಾಯದ ಸ್ವಾಭಿಮಾನಕ್ಕೆ ತಕ್ಕಂತೆ ವಾಲ್ಮೀಕಿ ಸಮಾಜಕ್ಕೆ ಸದಾ ಕಾರ್ಯ ಮಾಡಿದ್ದೇನೆ ಎಂದೂ ಅವರು ಹೇಳಿದರು.ಅವರು ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಸುಮಾರು 17 ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರಗಳು, ಎರಡು ಲೋಕಸಭಾ ಕ್ಷೇತ್ರಗಳಿವೆ. ಇಲ್ಲಿ ವಾಲ್ಮೀಕಿ ಸಮಾಜದವರನ್ನು ಗೆಲ್ಲಿಸುವ ಮೂಲಕ ಇಡೀ ಸಮಾಜ ಮತ್ತು ಬಿಜೆಪಿಗೆ ಕೊಡುಗೆ ಕೊಡುವುದರಲ್ಲಿ ನನ್ನ ಪಾಲು ಹೆಚ್ಚಿದೆ. ಬಳ್ಳಾರಿ ಸೇರಿ ಸುತ್ತಲಿನ ಜಿಲ್ಲೆಗಳ ವಾಲ್ಮೀಕಿ ಸಮಾಜಕ್ಕೆ ಬೇಕಾಗುವ ಎಲ್ಲಾ ಕೆಲಸ ಕಾರ್ಯವನ್ನು ಬಿ.ಶ್ರೀರಾಮುಲು ಸೇರಿ ಮಾಡಿದ್ದೇವೆ. ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸೇರಿ ವಿವಿಧ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿದೆ. ಪ್ರಸ್ತುತ ಬಿ.ಶ್ರೀರಾಮುಲು ಬಿಜೆಪಿಯಲ್ಲಿದ್ದಾರೆ. ನಾನು ಯಾವತ್ತೂ ಕೂಡ ಕೆಆರ್‌ಪಿ ಪಕ್ಷಕ್ಕೆ ಅವರನ್ನು ಕರೆದಿಲ್ಲ. ವಾಲ್ಮೀಕಿ ಸಮಾಜ ಮಾತು ಕೊಟ್ಟರೆ ತಪ್ಪುವ ಸಮಾಜವಲ್ಲ. ನಾನು ರಾಜಕೀಯದಲ್ಲಿ ಸ್ಥಾನಮಾನ ಪಡೆಯಲು ಈ ಸಮಾಜವೂ ಸಹ ಪ್ರಮುಖ ಕಾರಣವಾಗಿದೆ ಎಂದು ರೆಡ್ಡಿ ಹೇಳಿದರು.