ನವದೆಹಲಿ: ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್ ಐಆರ್ ಅನ್ನು ರದ್ದುಪಡಿಸಲು ಕೋರಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಜುಬೈರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹಿಂದೂ ದೇವರ ವಿರುದ್ಧ 2018ರಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿ, ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದ ಆರೋಪದ ಪ್ರಕರಣದಲ್ಲಿ ದೆಹಲಿ ವಿಶೇಷ ಘಟಕದ ಪೊಲೀಸರು ಜುಬೈರ್ ಅವರನ್ನು ಜೂನ್ 27ರಂದು ಬಂಧಿಸಿದ್ದರು. ಆರೋಪಿ ಪತ್ರಕರ್ತನನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಸಲ್ಲಿಸಿದ ಅರ್ಜಿ ಮಾನ್ಯ ಮಾಡಿದ ಚೀಫ್ ಮೆಟ್ರೊಪಾಲಿಟನ್ ನ್ಯಾಯಾಲಯದ ನ್ಯಾಯಾಧೀಶರಾದ ಸ್ನಿಗ್ಧಾ ಸರ್ವಾರಿ ಅವರು ಜೂನ್ 28ರಂದು, ಪೊಲೀಸ್ ಕಸ್ಟಡಿಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದರು.
ಚೀಫ್ ಮೆಟ್ರೊಪಾಲಿಟನ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜುಬೈರ್ ಅವರ ಪರ ವಕೀಲರಾದ ವೃಂದಾ ಗ್ರೋವರ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ನಡುವೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್ ಐಆರ್ ಅನ್ನು ರದ್ದುಪಡಿಸಲು ಕೋರಿ ಮುಹಮ್ಮದ್ ಜುಬೈರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.