ಬೆಂಗಳೂರು: ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯನ್ನು ರಾಜ್ಯಗಳೇ ನಡೆಸಲು ಅವಕಾಶ ಮಾಡಿಕೊಡುವುದು ಉತ್ತಮ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ ಎಂದಿದ್ದಾರೆ. ನೀಟ್ ಅಕ್ರಮ ಗಂಭೀರ ಅಪರಾಧವಾಗಿದೆ ಎಂದರು.
ಹೀಗಾಗಿ ರಾಜ್ಯಗಳೇ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಲಿ ಎಂದು ಕೇಂದ್ರವನ್ನು ಮನವಿ ಮಾಡುತ್ತೇನೆ. ರಾಜ್ಯಗಳು ನಡೆಸುವ ಪರೀಕ್ಷೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಲಿ. ಅವರಿಗಾಗಿ ಮೀಸಲಾತಿಯನ್ನೂ ನೀಡಬಹುದು ಎಂದರು.
ಈ ಪರೀಕ್ಷೆಯಿಂದ ನಮ್ಮ ರಾಜ್ಯದ ಮಕ್ಕಳಿಗೆ ದೊಡ್ಡ ಅನ್ಯಾಯವಾಗುತ್ತಿವೆ. ನಾವು ಕಾಲೇಜುಗಳನ್ನು ಕಟ್ಟಿದ್ದೇವೆ. ನೀಟ್ ಪರೀಕ್ಷೆಯಿಂದ ಉತ್ತರ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಹೀಗಾಗಿ ನಮ್ಮ ಮಕ್ಕಳಿಗೆ ತಾರತಮ್ಯವಾಗುತ್ತಿದೆ. ನಮ್ಮ ಮಕ್ಕಳಿಗೆ ನ್ಯಾಯ ಒದಗಿಸಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇನ್ನು ನೀಟ್ ಅಕ್ರಮದ ಬಗ್ಗೆ ನಾನು ವೈದ್ಯಕೀಯ ಶಿಕ್ಷಣ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಯಾಗಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.