Home ಟಾಪ್ ಸುದ್ದಿಗಳು ಕಳ್ಳರ ಸಾಮ್ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪ, ಪ್ರತ್ಯಾರೋಪ ; ಆನೆ ಕದ್ದವನೂ ಕಳ್ಳ, ಅಡಿಕೆ ಕದ್ದವನೂ ಕಳ್ಳ...

ಕಳ್ಳರ ಸಾಮ್ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪ, ಪ್ರತ್ಯಾರೋಪ ; ಆನೆ ಕದ್ದವನೂ ಕಳ್ಳ, ಅಡಿಕೆ ಕದ್ದವನೂ ಕಳ್ಳ – ನ್ಯಾ. ಸಂತೋಷ್ ಹೆಗ್ಡೆ

ಬೆಂಗಳೂರು: ಹಾಲಿ ಸರ್ಕಾರದಲ್ಲಿ ಶೇ 40 ರಷ್ಟು, ಹಿಂದಿನ ಸರ್ಕಾರದಲ್ಲಿ ಶೇ 10 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಆರೋಪ, ಪ್ರತ್ಯಾರೋಪಗಳು ರಾಜಾರೋಷವಾಗಿ ನಡೆಯುತ್ತಿವೆ. ಆದರೆ ಆನೆ ಕದ್ದವನೂ ಕಳ್ಳ, ಅಡಿಕೆ ಕದ್ದವನೂ ಕಳ್ಳ. ಇಂತಹ ಕಳ್ಳರ ಸಾಮ್ರಾಜ್ಯದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದೇವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕರೆ ವಿಷಾದ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ವಲಯ 1 ಹಾಗೂ 2ರ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಕ್ಯಾಮ್ಸ್ ಕರ್ನಾಟಕದಿಂದ ಕುವೆಂಪು ಕಲಾ ಕ್ಷೇತ್ರದಲ್ಲಿ ಖಾಸಗಿ ಶಾಲಾ ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಕಾಮಗಾರಿ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಲು ಸಾಧ್ಯವೇ?. ಆಗಿರುವ ರಸ್ತೆ ಕಾಮಗಾರಿಗಳಲ್ಲಿ ಶೇ 70 ರಷ್ಟು ಗುಂಡಿ ಬಿದ್ದಿವೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ಒಂದು ಕಿಲೋಮೀಟರ್ ರಸ್ತೆಯನ್ನು 17 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಮಳೆ ಬಂದ ನಂತರ ಈ ರಸ್ತೆಯ ಪರಿಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ಅಂತಾರಾಷ್ಟ್ರೀಯ ಟ್ರಾನ್ಸ್ ರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತಕ್ಕಿಂತ ಚೈನಾದಲ್ಲಿ ಚೈನಾದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ ಎಂದು ವರದಿ ನೀಡಿದೆ. ಚೈನಾದಲ್ಲಿ ಭ್ರಷ್ಟಾಚಾರ ಮಾಡಿದರೆ ಗಲ್ಲು ಶಿಕ್ಷೆ, ನಮ್ಮಲ್ಲಿ 7 ವರ್ಷ ಜೈಲು ಶಿಕ್ಷೆ. ಹೀಗಾಗಿ ಭ್ರಷ್ಟಾಚಾರ ದೇಶ, ಗಡಿಗಳನ್ನು ಮೀರಿದ ಪಿಡುಗು ಎಂದರು.

ಭ್ರಷ್ಟಾಚಾರ ನಿರ್ಮೂಲನೆಯಾಗಬೇಕಾದರೆ ಪ್ರತಿಯೊಬ್ಬರೂ ತೃಪ್ತಿ ಎನ್ನುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ, ಆದರೆ ಇದೇ ರೀತಿ ದುರಾಸೆಯೂ ಸಹ ಅಭಿವೃದ್ಧಿ ಹೊಂದುತ್ತಿದೆ. ಭ್ರಷ್ಟಾಚಾರ, ಅಕ್ರಮಗಳ ಮೂಲ ದುರಾಸೆಯಾಗಿದ್ದು, ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ದುರಾಸೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ವಿಚಿತ್ರವೆಂದರೆ ದುರಾಸೆಯನ್ನು ಸೃಷ್ಟಿಕರ್ತನಿಂದಲೂ ಸಹ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಿಂದೆ ಈ ಮಟ್ಟದ ದುರಾಸೆ ಇರಲಿಲ್ಲ. ಇದೀಗ  ಪ್ರಮಾಣಿಕತೆ ಮಾಯವಾಗಿ ಜೀವನಪರ್ಯಂತ ದುರಾಸೆಯಂತಹ ದುರ್ಗುಣಗಳು ಮನುಷ್ಯನನ್ನು  ಆವರಿಸಿಕೊಳ್ಳುತ್ತವೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

Join Whatsapp
Exit mobile version