Home ಟಾಪ್ ಸುದ್ದಿಗಳು ಲಂಚ ಪಡೆದ ಆರೋಪ; ಕೆಎಎಸ್‌ ಅಧಿಕಾರಿಗಳ ಬಂಧನ

ಲಂಚ ಪಡೆದ ಆರೋಪ; ಕೆಎಎಸ್‌ ಅಧಿಕಾರಿಗಳ ಬಂಧನ

ಬೆಂಗಳೂರು: ನಿರಾಕ್ಷೇಪಣಾ ಪತ್ರ ನೀಡಲು ₹ 2.5 ಲಕ್ಷ ಲಂಚ ಪಡೆದ ಬಗ್ಗೆ ದೂರು ದಾಖಲಾದ ಬಳಿಕ ಲಂಚದ ಹಣವನ್ನು ಮರಳಿಸುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಭೂಮಾಪಕರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.


ಬಂಧಿತರನ್ನು ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಯಲ್ಲಿದ್ದ ಕೆಎಎಸ್‌ ಅಧಿಕಾರಿ ಎ.ಬಿ. ವಿಜಯಕುಮಾರ್‌ ಮತ್ತು ಅವರ ಕಚೇರಿಯ ಭೂಮಾಪಕ ರಘುನಾಥ್‌ ಎಂದು ಗುರುತಿಸಲಾಗಿದೆ.


ಬೆಂಗಳೂರು ಉತ್ತರ ತಾಲೂಕಿನ ಲಗ್ಗೆರೆ ಹೋಬಳಿಯಲ್ಲಿರುವ 30 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ನಿರಾಕ್ಷೇಪಣಾ ಪತ್ರ ನೀಡಲು ಆರೋಪಿಗಳು ₹ 2.5 ಲಕ್ಷ ಲಂಚ ಪಡೆದುಕೊಂಡಿದ್ದರು. ಈ ಬಗ್ಗೆ ಅರ್ಜಿದಾರರು ಕೆಐಎಡಿಬಿ ಉಪ ಆಯುಕ್ತರಿಗೆ ದೂರು ನೀಡಿದ್ದು, ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆ ದೂರುದಾರರನ್ನು ಸಂಪರ್ಕಿಸಿದ ಆರೋಪಿಗಳು, ದೂರನ್ನು ಹಿಂಪಡೆದರೆ ₹ 2.5 ಲಕ್ಷದೊಂದಿಗೆ ₹ 50,000 ಸೇರಿಸಿ ವಾಪಸ್‌ ನೀಡುವುದಾಗಿ ತಿಳಿಸಿದ್ದರು. ದೂರುದಾರರಿಗೆ ಹಣ ವಾಪಸ್‌ ನೀಡುತ್ತಿದ್ದಾಗ ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version