Home ಟಾಪ್ ಸುದ್ದಿಗಳು ಅಲ್ಲಮಾ ಇಕ್ಬಾಲ್’ರ ಪ್ರಸಿದ್ಧ ‘ಲಬ್ ಪೆ ಆತಿ ಹೈ ದುವಾ…’ ಕವಿತೆಯನ್ನು ಶಾಲೆಯಲ್ಲಿ ಹಾಡಿದ್ದಕ್ಕಾಗಿ ಪ್ರಾಂಶುಪಾಲರ...

ಅಲ್ಲಮಾ ಇಕ್ಬಾಲ್’ರ ಪ್ರಸಿದ್ಧ ‘ಲಬ್ ಪೆ ಆತಿ ಹೈ ದುವಾ…’ ಕವಿತೆಯನ್ನು ಶಾಲೆಯಲ್ಲಿ ಹಾಡಿದ್ದಕ್ಕಾಗಿ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು, ಅಮಾನತು

ಲಕ್ನೋ: “ಲಬ್ ಪೆ ಆತಿ ಹೈ ದುವಾ…” ಕವಿತೆಯನ್ನು ವಿದ್ಯಾರ್ಥಿಗಳಿಂದ ಹಾಡಿಸಿದ್ದಕ್ಕಾಗಿ ಉತ್ತರ ಪ್ರದೇಶದ ಬರೇಲಿಯ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಾ ಮಿತ್ರರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಲ್ಲಮಾ ಇಕ್ಬಾಲ್ ಅವರ ಪ್ರಸಿದ್ಧ “ಲಬ್ ಪೆ ಆತಿ ಹೈ ದುವಾ” ಕವಿತೆಯನ್ನು ವಿದ್ಯಾರ್ಥಿಗಳು ಬೆಳಿಗ್ಗೆ ಅಸೆಂಬ್ಲಿಯಲ್ಲಿ ಪಠಿಸುವ ವೀಡಿಯೊ ವೈರಲ್ ಆದ ಬೆನ್ನಲ್ಲೇ ಸ್ಥಳೀಯ ವಿಶ್ವ ಹಿಂದೂ ಪರಿಷತ್ (ವಿಎಚ್’ಪಿ) ಕಾರ್ಯಕರ್ತ ಸೋಮಪಾಲ್ ಸಿಂಗ್ ರಾಥೋಡ್ ನೀಡಿದ ದೂರಿನ ಮೇರೆಗೆ ಶಾಲಾ ಪ್ರಾಂಶುಪಾಲ ನಹೀದ್ ಸಿದ್ದಿಕಿ ಮತ್ತು ಶಿಕ್ಷಾ ಮಿತ್ರ ವಜೀರುದ್ದೀನ್ ವಿರುದ್ಧ “ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ” ಆರೋಪದ ಮೇಲೆ ಫರೀದ್’ಪುರ ಪೊಲೀಸ್ ಠಾಣೆಯಲ್ಲಿ ಎಫ್’ಐಆರ್ ದಾಖಲಿಸಲಾಗಿದೆ.

ಶಿಕ್ಷಕರಾದ ನಹೀದ್ ಸಿದ್ದಿಕಿ ಮತ್ತು ವಜೀರುದ್ದೀನ್ ಅವರು ಹಿಂದೂಗಳ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಮುಸ್ಲಿಂ ವಿಧಾನದ ಪ್ರಕಾರ ವಿದ್ಯಾರ್ಥಿಗಳನ್ನು ಪ್ರಾರ್ಥನೆಯನ್ನು ಪಠಿಸುವಂತೆ ಮಾಡುತ್ತಿದ್ದರು. ವಿದ್ಯಾರ್ಥಿಗಳನ್ನು ಇಸ್ಲಾಮಿನತ್ತ ಆಕರ್ಷಿಸಲು ಮತ್ತು ಮತಾಂತರಿಸಲು ಶಿಕ್ಷಕರು ಇದನ್ನು ಮಾಡುತ್ತಿದ್ದಾರೆ ಎಂದು ವಿಎಚ್’ಪಿ ಕಾರ್ಯಕರ್ತರು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಮಧ್ಯೆ ಶಿಕ್ಷಣ ಇಲಾಖೆ ಶಾಲಾ ಪ್ರಾಂಶುಪಾಲರನ್ನು ಅಮಾನತುಗೊಳಿಸಿದ್ದು, ಶಿಕ್ಷಾ ಮಿತ್ರನ ವಿರುದ್ಧ ತನಿಖೆಗೆ ಆದೇಶಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬರೇಲಿಯ ಮೂಲ ಶಿಕ್ಷಾ ಅಧಿಕಾರಿ (ಬಿಎಸ್’ಎ) ವಿನಯ್ ಕುಮಾರ್ , ಇದು ನಿಗದಿತ ಪ್ರಾರ್ಥನೆಯಲ್ಲ, ಆದ್ದರಿಂದ ಶಾಲೆಯ ಪ್ರಾಂಶುಪಾಲ ನಹೀದ್ ಸಿದ್ದಿಕಿ ಅವರನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಾ ಮಿತ್ರರ ವಿರುದ್ಧ ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಮಧ್ಯೆ , ಘಟನೆ ನಡೆದಾಗ ತಾನು ಶಾಲೆಯಲ್ಲಿ ಇರಲಿಲ್ಲ, ಡಿಸೆಂಬರ್ 12 ರಿಂದ ರಜೆಯ ಮೇಲೆ ತೆರಳಿರುವುದಾಗಿ ನಹೀದ್ ಸಿದ್ದಿಕಿ ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version