Home ಟಾಪ್ ಸುದ್ದಿಗಳು ಜೌನ್ ಪುರ ಕಸ್ಟಡಿ ಸಾವನ್ನು ಸಿಬಿಐಗೆ ವಹಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ

ಜೌನ್ ಪುರ ಕಸ್ಟಡಿ ಸಾವನ್ನು ಸಿಬಿಐಗೆ ವಹಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ

ಅಲಹಾಬಾದ್: 24 ವರ್ಷದ ಯುವಕನ ಕಸ್ಟಡಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಮಾತ್ರವಲ್ಲ ಆರೋಪಿಗಳನ್ನು ರಕ್ಷಿಸಲು ಪೊಲೀಸರು ಯೋಜನೆ ರೂಪಿಸಿದ್ದಾರೆ ಎಂದು ನ್ಯಾಯಾಲಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಜೌನ್ ಪುರ ಜಿಲ್ಲೆಯ ಅಜಯ್ ಕುಮಾರ್ ಯಾದವ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎಸ್.ಪಿ ಕೇಶರ್ವಾನಿ ಮತ್ತು ಪಿಯೂಷ್ ಅಗರವಾಲ್ ಅವರ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

24 ವರ್ಷ ಪ್ರಾಯದ ಅರ್ಚಕರಾಗಿದ್ದ ಕೃಷ್ಣ ಯಾದವ್ ಸಾವಿಗೆ ಸಂಬಂಧಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೃಷ್ಣ ಅವರನ್ನು ವಿಚಾರಣೆಗೆಂದು ಠಾಣೆಗೆ ಕರೆಸಿಕೊಂಡ ಪೊಲೀಸರು ನಂತರ ಆತ ಸಾವನ್ನಪ್ಪಿದ್ದಾನೆ ಎಂದು ಕುಟುಂಬಕ್ಕೆ ಮಾಹಿತಿ ನೀಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಸೆಕ್ಷನ್ 302 ಅಡಿಯಲ್ಲಿ ಜೌನ್ ಪುರ ಜಿಲ್ಲೆಯ ಬುಕ್ಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ನ್ಯಾಯಾಂಗ ತನಿಖೆಯನ್ನು ನಡೆಸಿತ್ತಾದರೂ ತನಿಖೆಯಲ್ಲಿ ಪ್ರಗತಿ ಕಂಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ನ್ಯಾಯಯುತ ತನಿಖೆಯನ್ನು ಸ್ವತಂತ್ರ ಮತ್ತು ನಿಷ್ಪಕ್ಷಪಾತ ಏಜಿನ್ಸಿ ನಡೆಸಬೇಕಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐ ವಹಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ತನಿಖೆಯನ್ನು ಸಿಬಿಐ ವರ್ಗಾಯಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20 ರಂದು ಮುಂದೂಡಿದೆ.

Join Whatsapp
Exit mobile version