ಮಂಗಳೂರು: ನಿವೃತ್ತ ಧರ್ಮಾಧ್ಯಕ್ಷ ಅಲೋಶಿಯಸ್ ಪೌಲ್ ಡಿಸೋಜಾ ಅವರು ಸರ್ವ ಧರ್ಮ ಕ್ರಿಸ್ಮಸ್ ಸೌಹಾರ್ದ ಕೂಟವನ್ನು ಸಸ್ಯಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಜಗತ್ತಿನ ಉದ್ದಗಲಕ್ಕೂ ಆಚರಣೆ ಮಾಡುವ ಹಬ್ಬ ಕ್ರಿಸ್ಮಸ್. ಕ್ರಿಶ್ಚಿಯನ್ನರಲ್ಲದೆ ಇತರ ಧರ್ಮೀಯರು ಸಹ ಇದನ್ನು ಆಚರಿಸುತ್ತಾರೆ. ಇಲ್ಲಿ ಸಹ ಎಲ್ಲ ಧರ್ಮೀಯರು ಸೇರಿದ್ದಾರೆ. ಯೇಸು ಅವರು ಪರಿವರ್ತಕರಾಗಿ, ಸುಧಾರಕರಾಗಿ, ವಿಮೋಚಕನಾಗಿ ಲೋಕದ ದೈವಿಕ ವೈದ್ಯರಾಗಿ, ಶಾಂತಿ, ಕ್ಷಮೆ, ಕರುಣೆಯ ಮೂರ್ತಿಯಾಗಿ ಕಾಣಿಸಿಕೊಂಡವರು ಎಂದು ಪೌಲ್ ಡಿಸೋಜಾ ಅವರು ಹೇಳಿದರು.
ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ ಬಿಷಪ್ ಜತ್ತನ್ನಸ ಮೆಮೋರಿಯಲ್ ಹಾಲಿನಲ್ಲಿ ಕ್ರಿಸ್ಮಸ್ ಸರ್ವ ಧರ್ಮ ಕೂಟ ನಡೆಯಿತು.
ಕೋಡಿಜಾಲ್ ಇಬ್ರಾಹಿಂ ಮಾತನಾಡಿ, ಇಸ್ಲಾಂ ಧರ್ಮದ ಮೂಲ ಕೂಡ ಬೈಬಲಿನಲ್ಲಿದೆ. ಸರ್ವೇಜನ ಸುಖಿನೋ ಭವಂತು ಎನ್ನುವುದು ಎಲ್ಲ ಧರ್ಮಗಳ ಸಾರ. ಇಂದು ಜನರಲ್ಲಿ ಧರ್ಮದ ಅರಿವು ಕಡಿಮೆ ಆಗಿ ಕಿಚ್ಚಿಡುವ ಆವೇಶ ಅಧಿಕವಾಗಿದೆ. ಇದು ಕಂಡಿತ ಧರ್ಮದ ಆಚರಣೆ ಅಲ್ಲ ಎಂದು ತಿಳಿಸಿದರು.
ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರು ಸೌಹಾರ್ದದ ನಗು ಚೆಲ್ಲುವಂತೆ ಎರಡು ಮಾತನಾಡಿದರು.
ಎಚ್. ಎಂ. ವಾಟ್ಸನ್ ಮಾತನಾಡಿ, ಯೇಸು ಅವರು ಬಡವರಲ್ಲಿ ಬಡವರಾಗಿ ದೀನರಲ್ಲಿ ದೀನರಾಗಿ, ಮಾನವರಲ್ಲಿ ಸಮಾಧಾನಕ್ಕಾಗಿ ಬಾಳಿದವರು ಎಂದರು.
ಕ್ರಿಸ್ಮಸ್ ಸಂದೇಶ ನೀಡಿದ ಆಕಾಶವಾಣಿ ಮಾಜಿ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅವರು ಕಷ್ಟದಲ್ಲಿ, ಹಸಿವಿನಲ್ಲಿರುವವರಿಗೆ ಸಹಾಯ ಮಾಡುವುದೇ ಧರ್ಮ ಎಂದು ಜೀಸಸ್ ಹೇಳಿದರು. ನಾರಾಯಣ ಗುರುಗಳು ಜಾತಿ ಮುಖ್ಯವಲ್ಲ ನೀತಿ ಮುಖ್ಯ ಎಂದು ಹೇಳಿದವರು ಮತ್ತು ಹಾಗೆ ಬದುಕಿದವರು ಎಂದರು.
ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದ ಐವನ್ ಡಿಸೋಜಾ ಅವರು ಏಳು ವರುಷಗಳಿಂದ ತಾವು ಸರ್ವ ಧರ್ಮ ಕ್ರಿಸ್ಮಸ್ ಸೌಹಾರ್ದ ಕೂಟ ಹಾಗೂ ಹೊಸ ವರುಷ ಆಚರಿಸುತ್ತಿದ್ದೇನೆ. ಅಲ್ಲದೆ ದೀಪಾವಳಿ ಮೊದಲಾದ ಹಬ್ಬಗಳನ್ನು ಸರ್ವ ಜನಾಂಗದ ಶಾಂತಿಯ ತೋಟದ ಸ್ಥಾಪನೆಗಾಗಿ ನಡೆಸುತ್ತಿರುವುದಾಗಿ ಡಿಸೋಜಾ ತಿಳಿಸಿದರು.
ಕಾರ್ಯಕ್ರಮದಲ್ಲಿ ತುಳು ಚಿತ್ರನಟ ಅರವಿಂದ ಬೋಳಾರ್, ಡಾ. ಕವಿತಾ, ಕೆಟಿಸಿಯ ಪ್ರಿನ್ಸಿಪಾಲ್ ರೆವೆರೆಂಡ್ ವಾಟ್ಸನ್, ಉದ್ಯಮಿ ವಿವೇಕ್ ರಾಜ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.