Home ಟಾಪ್ ಸುದ್ದಿಗಳು ಕಾಂಗ್ರೆಸ್ ಪಕ್ಷದ ಎಲ್ಲಾ ಅಂಗ ಸಂಸ್ಥೆಗಳು ದೇಶದ ಭದ್ರ ಬುನಾದಿ ಗಟ್ಟಿಗೊಳಿಸಲು ಶ್ರಮಿಸಬೇಕು : ಕನ್ನಯ್ಯ...

ಕಾಂಗ್ರೆಸ್ ಪಕ್ಷದ ಎಲ್ಲಾ ಅಂಗ ಸಂಸ್ಥೆಗಳು ದೇಶದ ಭದ್ರ ಬುನಾದಿ ಗಟ್ಟಿಗೊಳಿಸಲು ಶ್ರಮಿಸಬೇಕು : ಕನ್ನಯ್ಯ ಕುಮಾರ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಎಲ್ಲಾ ಅಂಗ ಸಂಸ್ಥೆಗಳು ದೇಶದ ಭದ್ರ ಬುನಾದಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಏಐಸಿಸಿ ಉಸ್ತುವಾರಿ ಕನ್ನಯ್ಯ ಕುಮಾರ್ ಹೇಳಿದ್ದಾರೆ.

ಭಾರತದ ಬುನಾದಿ ಎಂದರೆ ಅದು “ಇಂಡಿಯಾ”. ಇಂಡಿಯಾ ಎಂದರೆ ಒಂದು ಆಲೋಚನೆ. ಇಂಡಿಯಾವನ್ನು ಗಟ್ಟಿಗೊಳಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಆಯೋಜಿಸಿರುವ ಮೂರು ದಿನಗಳ “ಉತ್ತಮ ಭಾರತದ ಅಡಿಪಾಯ” ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಾವೇಶದ ಎರಡನೇ ದಿನವಾದ ಇಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಯುವ ಕಾಂಗ್ರೆಸ್ ಗಾಂಧಿವಾದದ ಮೂಲಕ ಪಕ್ಷದ ಬುನಾದಿಯನ್ನು ಗಟ್ಟಿಗೊಳಿಸಬೇಕು. ಯುವ ಕಾಂಗ್ರೆಸ್ ಆರ್.ಎಸ್.ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ಸ್ಥಿತಿಲ್ಲಿಯಲ್ಲಿದ್ದು, ಯುವ ಸಮೂಹದ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಬೇಕು ಎಂದರು.

ಯುವ ಕಾಂಗ್ರೆಸ್ ಸತ್ಯಕ್ಕಾಗಿ ಸಂಘರ್ಷ ನಡೆಸುತ್ತಿದ್ದು, ನಮ್ಮ ಹಿರಿಯ ನಾಯಕರ ಆಶಯಗಳನ್ನು ಎಂದಿಗೂ ಮರೆಯಬಾರದು. ಯುವ ಜನರಿಗಾಗಿ ಏನು ಮಾಡಬೇಕು ಎಂಬುದನ್ನು ಅರಿಯಬೇಕು. ದೇಶ ಇಂದು ಪಂಡಿತ್ ಜವಾಹರ್ ಲಾಲ್ ನೆಹರು ಅವರ ಕೈಯಲ್ಲಿಲ್ಲ. ಅಂಬೇಡ್ಕರ್, ಭಗತ್ ಸಿಂಗ್ ಅವರ ಕೈಯಲ್ಲಿಲ್ಲ. ತನ್ನ ಪತ್ನಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲದವರ ಕೈಯಲ್ಲಿ ದೇಶ ಇದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಇತಿಹಾಸ ಕಾಂಗ್ರೆಸ್ ಹೊಂದಿದ್ದು, ಸತ್ಯ ಹೇಳುವವರು ಎಂದಿಗೂ ಹೆದರಬಾರದು. ಸುಳ್ಳು ಹೇಳುವವರಿಗೆ ಹೆದರಿಕೆ ಸಹಜ. ಈ ದೇಶ ಪ್ರತಿಯೊಬ್ಬರಿಗೂ ಸೇರಿದ್ದು, ಎಲ್ಲರಿಗಾಗಿ ನಾವು ಹೋರಾಟ ಮಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ, ಎನ್.ಎಸ್.ಯು.ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version