ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ಕೂಡ 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಸಂಜೆ ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಪೊಲೀಸರ ಪರ ಸರ್ಕಾರಿ ಅಭಿಯೋಜಕ ವಾದ ಮಂಡಿಸಿ, ಸಾಕ್ಷ್ಯಗಳ ನಾಶ ಆಗಿರುವುದರಿಂದ ಎ2 ದರ್ಶನ್ ಅವರನ್ನು 14 ದಿನ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ, ದರ್ಶನ್ ಪರ ವಕೀಲ 14 ದಿನ ಯಾಕೆ ಎಂದು ಪ್ರಶ್ನಿಸಿದರು. ಈಗಾಗಲೇ ದರ್ಶನ್ ಮೊಬೈಲ್ ಸೀಜ್ ಆಗಿದೆ, ದರ್ಶನ್ ಅವರ ತೇಜೋವಧೆ ಮಾಡಲು ಈ ರೀತಿ ಮಾಡಲಾಗುತ್ತಿದೆ ಎಂದು ವಾದಿಸಿದ್ದಾರೆ. ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ನೀಡಲು ಸೂಚಿಸಿದ್ದಾರೆ. ನ್ಯಾಯಾಧೀಶರು “ಪೊಲೀಸ್ ಕಸ್ಟಡಿಗೆ” ಎಂದು ಹೇಳಿದ ಕೂಡಲೇ ಸ್ಟಾರ್ ನಟ ದರ್ಶನ್ ಕಣ್ಣೀರಿಟ್ಟ ಘಟನೆಯೂ ನಡೆಯಿತು.
ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ದರ್ಶನ್ ಎ2 ಆಗಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧನವಾಗಿ 6 ದಿನಗಳ ಪೊಲೀಸ್ ಕಸ್ಟಡಿಗೆ ಈಡಾದ ಆರೋಪಿಗಳು:
1.ಪವಿತ್ರಾ ಗೌಡ
2.ನಟ ದರ್ಶನ್
3.ಕೆ. ಪವನ್-ದರ್ಶನ್ ಮನೆಯಲ್ಲಿ ಇರುವ ದರ್ಶನ್ ಅಪ್ತ, ಕಿಡ್ನ್ಯಾಪ್ ಮಾಡಲು ಹೇಳಿದ್ದವನು, ಪವಿತ್ರಾಗೂ ಆಪ್ತ
4.ಪ್ರದೋಶ್- ಹೋಟೆಲ್ ಉದ್ಯಮಿ
5.ನಂದೀಶ್- ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ, ಕಿಡ್ನ್ಯಾಪ್ ಮಾಡಿಕೊಂಡು ಕರೆತಂದವನು
6.ಕೇಶವಮೂರ್ತಿ, ಪ್ರದೂಶ್ ಗೆಳೆಯ ಹಾಗೂ ಉದ್ಯಮಿ
7.ರಾಘವೇಂದ್ರ- ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ
8.ಎಂ.ಲಕ್ಷ್ಮಣ್
ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು ಎಂಬ ಆರೋಪ ಇದೆ. ಆ ಕಾರಣದಿಂದ ರೇಣುಕಾ ಸ್ವಾಮಿಯನ್ನು ದರ್ಶನ್ರ ಗ್ಯಾಂಗ್ ಅಪಹರಿಸಿತ್ತು. ಬೆಂಗಳೂರಿನಲ್ಲಿ ರೇಣುಕಾ ಸ್ವಾಮಿಯ ಹತ್ಯೆ ಮಾಡಲಾಯಿತು. ಬಳಿಕ ಶವವನ್ನು ರಾಜಕಾಲುವೆಗೆ ಎಸೆಯಲಾಯಿತು ಎಂಬ ಆರೋಪವಿದೆ. ಈ ಕುರಿತು ವಿಚಾರಣೆ ತೀವ್ರವಾಗಿದೆ.
ಕೇವಲ ವಿಚಾರಣೆ ಸಲುವಾಗಿ ಮಾತ್ರ ದರ್ಶನ್ ಅವರನ್ನು 6 ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ. ಪ್ರತಿ ದಿನ ವಕೀಲರನ್ನು ಭೇಟಿ ಮಾಡಿಸಬೇಕು ಹಾಗೂ ಪ್ರತಿ 2 ದಿನಕ್ಕೆ ತನಿಖೆಯ ವಿವರವನ್ನು ಕೋರ್ಟ್ಗೆ ನೀಡಬೇಕು ಅಂತ ಜಡ್ಜ್ ಸೂಚನೆ ನೀಡಿದ್ದಾರೆ ಎಂದು ನಟ ದರ್ಶನ್ ಪರ ವಕೀಲ ಮಾಹಿತಿ ನೀಡಿದ್ದಾರೆ
ಈ ಮಧ್ಯೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಚಿತ್ರದುರ್ಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ.