Home ಕ್ರೀಡೆ ಮ್ಯಾಡ್ರಿಡ್ ಓಪನ್; 19 ವರ್ಷದ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಮುಗ್ಗರಿಸಿದ ಜೊಕೊವಿಕ್

ಮ್ಯಾಡ್ರಿಡ್ ಓಪನ್; 19 ವರ್ಷದ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಮುಗ್ಗರಿಸಿದ ಜೊಕೊವಿಕ್

ಮ್ಯಾಡ್ರಿಡ್ ಓಪನ್ ಟೆನಿಸ್‌ ಟೂರ್ನಿಯ ರೋಚಕ ಸೆಮಿಫೈನಲ್‌ ಕಾದಾಟದಲ್ಲಿ 19 ವರ್ಷದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್, ವಿಶ್ವ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರನ್ನುಮಣಿಸಿ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಕಳೆದ 17 ವರ್ಷಗಳಲ್ಲಿಯೇ ಜೊಕೊವಿಕ್‌ರನ್ನು ಮಣಿಸಿದ ಅತಿ ಕಿರಿಯ ಆಟಗಾರ ಎಂಬ ಕೀರ್ತಿಗೂ ಕಾರ್ಲೋಸ್ ಪಾತ್ರರಾಗಿದ್ದಾರೆ.
ಮ್ಯಾಡ್ರಿಡ್‌ನ ಕಜ ಮಜಿಕಾ ಮೈದಾನದಲ್ಲಿ ಶನಿವಾರ ನಡೆದ ಮೂರು ಗಂಟೆ ಮತ್ತು 35 ನಿಮಿಷಗಳ ಸೆಮಿಫೈನಲ್‌ ಹೋರಾಟದಲ್ಲಿ, 7ನೇ ಶ್ರೇಯಾಂಕಿತ ಸ್ಪೇನ್‌ನ ಆಟಗಾರ 6-7(5) 6-4 7-6(5) ಅಂತರದಲ್ಲಿ ವಿಶ್ವ ನಂ.1 ಆಟಗಾರನನ್ನು ಮಣಿಸಿ, ಟೂರ್ನಿಯಿಂದ ಹೊರನಡೆಯುವಂತೆ ಮಾಡಿದರು.


ಮೊದಲ ಸೆಟ್‌ ಸೋತರೂ ಪಟ್ಟುಬಿಡದ ಕಾರ್ಲೋಸ್ ಅಲ್ಕರಾಜ್, ಬ್ಯಾಕ್‌ಹ್ಯಾಂಡ್‌ ಪಾಸಿಂಗ್‌ ಹೊಡೆತಗಳ ಮೂಲಕ ಜೊಕೊವಿಕ್‌ಗೆ ಸವಾಲೊಡ್ಡಿದರು. ಟೈ ಬ್ರೇಕ್‌ ವರೆಗೆ ಸಾಗಿದರೂ ಆತ್ಮವಿಶ್ವಾಸದಿಂದ ಮುನ್ನುಗ್ಗಿದ ಕಾರ್ಲೋಸ್, ಸತತ ಎರಡು ಸೆಟ್‌ಗಳನ್ನು ತನ್ನದಾಗಿಸಿಕೊಂಡರು. ಆ ಮೂಲಕ, 35 ವರ್ಷದ ಜೊಕೊವಿಕ್‌ ವಿರುದ್ಧದ ಮೊದಲ ಮುಖಾಮುಖಿಯಲ್ಲೇ 19 ವರ್ಷದ ಕಾರ್ಲೋಸ್ ಅಲ್ಕರಾಜ್ ಗೆದ್ದು ಸಂಭ್ರಮಿಸಿದರು.
ಇದಕ್ಕೂ ಮೊದಲು ಅಂತಿಮ ಎಟ್ಟರ ಘಟ್ಟದಲ್ಲಿ ಮಾಜಿ ಚಾಂಪಿಯನ್‌ ರಾಫೆಲ್ ನಡಾಲ್‌ರನ್ನು 6-2, 6-1, 36 ಅಂತರದಲ್ಲಿ ಮಣಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆ ಮೂಲಕ ಒಂದೇ ಟೂರ್ನಿಯಲ್ಲಿ ದಿಗ್ಗಜ ಆಟಗಾರರಾದ ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್‌ರನ್ನು ಮಣಿಸಿದ ಮೊತ್ತ ಮೊದಲ ಆಟಗಾರ ಎಂಬ ಕೀರ್ತಿಗೆ ಕಾರ್ಲೋಸ್ ಅಲ್ಕರಾಜ್ ಪಾತ್ರರಾಗಿದ್ದಾರೆ. ಭಾನುವಾರ ರಾತ್ರಿ ನಡೆಯುವ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಅಲೆಕ್ಸಾಂಡರ್ ಜ್ವೆರೆವ್ ಸವಾಲನ್ನು ಸ್ಪೇನ್‌ನ ಯುವ ಆಟಗಾರ ಎದುರಿಸಲಿದ್ದಾರೆ.
ಭವಿಷ್ಯದಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಶ್ರೇಷ್ಠ ಆಟಗಾರರಾಗುತ್ತಾರೆ ಎಂದು ಪಂದ್ಯದ ಬಳಿಕ ನೊವಾಕ್ ಜೊಕೊವಿಕ್ ಶ್ಲಾಘಿಸಿದ್ದಾರೆ. ʻನಾಳೆ ಫೈನಲ್‌ನಲ್ಲಿ ಶುಭವಾಗಲಿ @carlitosalcarazz (ಕಾರ್ಲೋಸ್ ಅಲ್ಕರಾಜ್) ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Join Whatsapp
Exit mobile version