ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರು ನಡೆಸುತ್ತಿರುವ ಗ್ರಾಮ ವಾಸ್ತವ್ಯ ಮಾದರಿ ಕಾರ್ಯಕ್ರಮ. ಇದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದು, ಪತ್ರಕರ್ತರು ನಗರದಲ್ಲಿ ವಾಸ್ತವ್ಯ ಕಾರ್ಯಕ್ರಮ ಮಾಡುವುದಾದರೆ ಪಾಲಿಕೆ ವತಿಯಿಂದ ಸಹಕಾರ ನೀಡುವುದಾಗಿ ನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗ್ರಾಮ ವಾಸ್ತವ್ಯ ಮಾಡಲಾದ ಕಡಬ ತಾಲೂಕಿನ ಕೊಂಬಾರು, ಸುಳ್ಯ ತಾಲೂಕಿನ ಮಡಪ್ಪಾಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ತನ್ನ ಸಿಎಸ್ಆುರ್ ಯೋಜನೆಯಡಿ ನೋಟ್ ಪುಸ್ತಕಗಳನ್ನು ಒದಗಿಸಿದ್ದು, ಪ್ರೆಸ್ ಕ್ಲಬ್ ನಲ್ಲಿ ಅವುಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಗಳ ಆಡಳಿತ ಮಂಡಳಿಯ ಬೇಡಿಕೆ ಮೇರೆಗೆ ಕೆಐಒಸಿಎಲ್ ಸಂಸ್ಥೆಗೆ ಮನವಿ ಮಾಡಲಾಗಿತ್ತು. ಅದರಂತೆ ಸಂಸ್ಥೆ 1 ಲಕ್ಷ ರೂ. ನೀಡಿದ್ದು, ಅದರಲ್ಲಿ ಪುಸ್ತಕ ಖರೀದಿಸಲಾಗಿದೆ. ಸುಮಾರು 430 ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದರು. ಕೆಐಒಸಿಎಲ್ ಎಂಡಿ ಸಾಮಿನಾಥನ್ ಪುಸ್ತಕವನ್ನು ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಕೊಂಬಾರು ಸರಕಾರಿ ಶಾಲೆಯ 256 ಹಾಗೂ ಮಡಪ್ಪಾಡಿ ಸರಕಾರಿ ಶಾಲೆಯ 54 ಮಕ್ಕಳು ಈ ನೋಟ್ ಪುಸ್ತಕಗಳ ಪ್ರಯೋಜನ ಪಡೆಯಲಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕೆಐಒಸಿಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸ್ವಾಮಿನಾಥನ್, ಕೆಐಒಸಿಎಲ್ ನಿರ್ದೇಶಕ (ಹಣಕಾಸು) ಸ್ವಪನ್ ಕುಮಾರ್ ಗೊರೈ, ನಿರ್ದೇಶಕ (ಉತ್ಪಾದನೆ ಮತ್ತು ಯೋಜನೆ) ಕೆ.ವಿ.ಭಾಸ್ಕರ ರೆಡ್ಡಿ, ಮಹಾಪ್ರಬಂಧಕ (ಉತ್ಪಾದನೆ) ರಾಮಕೃಷ್ಣ ರಾವ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ಕ್ಲತಬ್ ಅಧ್ಯಕ್ಷ ಅನ್ನು ಮಂಗಳೂರು,ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು