ಲಕ್ನೋ: ಪಂಚರಾಜ್ಯ ಚುನಾವಣೆಯ ಪೈಕಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಗೆದ್ದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿಯ ಸೀಟ್ ಗಳಿಕೆಯನ್ನು ಕಡಿಮೆಗೊಳಿಸಬಹುದೆಂದು ಸಮಾಜವಾದಿ ಪಕ್ಷ ಸಾಭೀತುಪಡಿಸಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅಖಿಲೇಶ್, ಬಿಜೆಪಿಯ ಸೀಟ್ ಗಳಿಕೆಯನ್ನು ಕಡಿಮೆಗೊಳಿಸಬಹುದೆಂದು ಎಸ್ಪಿ ಸಾಭೀತುಪಡಿಸಿದೆ. ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಪಕ್ಷ ಸೀಟ್ ಗಳಿಕೆಯಲ್ಲಿ ಎರಡೂವರೆ ಪಟ್ಟು ಹೆಚ್ಚಳ ಮತ್ತು ಮತ ಗಳಿಕೆಯಲ್ಲಿ ಒಂದೂವರೆ ಪಟ್ಟು ಹೆಚ್ಚಳಕ್ಕೆ ನಾನು ಕೃತಜ್ಞನಾಗಿದ್ದೇನೆ. ತಮ್ಮ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ಉತ್ತರ ಪ್ರದೇಶ ಜನತೆಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಪ್ರದೇಶದ ಒಟ್ಟು 403 ಸೀಟ್ ಗಳ ಪೈಕಿ ಬಿಜೆಪಿ ಮೈತ್ರಿಕೂಟ ಒಟ್ಟು 273 ಸ್ಥಾನಗಳನ್ನು ಗೆದ್ದಿವೆ. 2017 ರ ಚುನಾವಣೆಯಲ್ಲಿ ಬಿಜೆಪಿ ಪಡೆದ ಸೀಟು ಗಳ ಪೈಕಿ 2022 ರ ಚುನಾವಣೆಯಲ್ಲಿ 57 ಸೀಟುಗಳು ಕುಸಿತ ಕಂಡಿದೆ.
2022 ರ ಚುನಾವಣೆಯಲ್ಲಿ ಅಖಿಲೇಶ್ ನೇತೃತದ ಸಮಾಜವಾದಿ ಪಕ್ಷವು 111 ಗೆದ್ದುಕೊಂಡಿದೆ. 2017 ರ ಚುನಾವಣೆಗಿಂತ ಈ ಸಲ 64 ಸೀಟುಗಳು ಹೆಚ್ಚಳವಾಗಿದೆ. ಇದು ಸಮಾಜವಾದಿ ಪಕ್ಷದ ಅತ್ಯುತ್ತಮ ಪ್ರದರ್ಶನವಾಗಿದೆ ಎಂದು ಹೇಳಲಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. 2017 ರಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ ಮತ್ತು 2019 ರಲ್ಲಿ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು.