ನವದೆಹಲಿ : ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ, ಆಡಳಿತಾರೂಢ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಪ್ತ, ಮಾಜಿ ಐಎಎಸ್ ಅಧಿಕಾರಿ ಎ.ಕೆ. ಶರ್ಮಾರನ್ನು ಬಿಜೆಪಿ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಾಗಿರುವಾಗ ಉತ್ತರ ಪ್ರದೇಶ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ ಎನ್ನಲಾಗುತ್ತಿರುವ ನಡುವೆ, ಈ ನೇಮಕಾತಿ ಹಲವು ಚರ್ಚೆಗಳಿಗೆಡೆ ಮಾಡಿಕೊಟ್ಟಿದೆ.
ಎಂಎಲ್ ಸಿ ಹಾಗೂ ಮಾಜಿ ಐಎಎಸ್ ಅಧಿಕಾರಿ ಶರ್ಮಾರನ್ನು ಉತ್ತರ ಪ್ರದೇಶ ಸರಕಾರದಲ್ಲಿ ಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂದು ಕಳೆದ ಕೆಲವು ದಿನಗಳಿಂದ ಚರ್ಚೆಗಳಾಗುತ್ತಿದ್ದವು. ಕೋವಿಡ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿಯವರ ಕ್ಷೇತ್ರ ವಾರಾಣಸಿಗೆ ಶರ್ಮಾರನ್ನು ಕಳುಹಿಸಿ ಕೊಡಲಾಗಿತ್ತು.
ಈ ವರ್ಷದ ಆರಂಭದಲ್ಲಿ ಶರ್ಮಾ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಗುಜರಾತ್ ಸಿಎಂ ಆಗಿ ಮೋದಿ ಅಧಿಕಾರ ವಹಿಸಿಕೊಂಡಿದ್ದಾಗ, ಅವರ ಕಾರ್ಯದರ್ಶಿಯಾಗಿ ಶರ್ಮಾ ಕಾರ್ಯ ನಿರ್ವಹಿಸಿದ್ದರು.