ಲಕ್ಷದ್ವೀಪ ನಿವಾಸಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇನೆ : ಆಯಿಷಾ ಸುಲ್ತಾನಾ

Prasthutha|

ತಿರುವನಂತಪುರಂ : ಲಕ್ಷದ್ವೀಪದ ನಿವಾಸಿಗಳಿಗೆ ನ್ಯಾಯ ಸಿಗುವವರೆಗೂ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ನಟಿ, ನಿರ್ಮಾಪಕಿ ಆಯಿಷಾ ಸುಲ್ತಾನಾ ಹೇಳಿದ್ದಾರೆ. ಲಕ್ಷದ್ವೀಪದಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿರುವ ನಟಿ ಆಯಿಷಾ ಸುಲ್ತಾನಾ ಭಾನುವಾರ ವಿಚಾರಣೆಗಾಗಿ ಕವರಟ್ಟಿ ಪೊಲೀಸರ ಮುಂದೆ ಹಾಜರಾಗಲು ದ್ವೀಪ ಸಮೂಹಕ್ಕೆ ತೆರಳುವ ಮೊದಲು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

- Advertisement -

ತಮ್ಮೊಂದಿಗೆ ತಮ್ಮ ವಕೀಲರು ಕೂಡ ಪ್ರಯಾಣಿಸುತ್ತಿದ್ದು, ತನಿಖೆಗೆ ಪೊಲೀಸರೊಂದಿಗೆ ಸಹಕರಿಸುವುದಾಗಿ ಅವರು ಹೇಳಿದ್ದಾರೆ.

“ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆಯಿದೆ” ಎಂದು ಅವರು ತಿಳಿಸಿದ್ದಾರೆ. “ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ನಾನು ಈ ಬಗ್ಗೆ ಎಲ್ಲವನ್ನೂ ಸ್ಪಷ್ಟವಾಗಿ ನನ್ನ ಫೇಸ್‌ ಬುಕ್‌ ಪೋಸ್ಟ್‌ ನಲ್ಲಿ ಸ್ಪಷ್ಟಪಡಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

- Advertisement -

ಟಿವಿ ಕಾರ್ಯಕ್ರಮವೊಂದರಲ್ಲಿ ಬಳಸಲಾದ ʼಜೈವಿಕ ಶಸ್ತ್ರಾಸ್ತ್ರʼ ಪದ ಎಲ್ಲಾ ವಿವಾದಗಳಿಗೆ ಮೂಲ ಕಾರಣವಾಗಿದೆ. ನಾನು ದೇಶದ ವಿರುದ್ಧ ಏನೂ ಮಾಡಿಲ್ಲ. ನಾನು ಬಳಸಿದ ಒಂದು ಪದದಿಂದಾಗಿ ಇದೆಲ್ಲಾ ನಡೆದಿದೆ. ಹೀಗಾಗಿ, ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತುಪಡಿಸುವುದು ನನ್ನ ಜವಾಬ್ದಾರಿ. ನಾನು ನನ್ನ ಭೂಮಿ ಮತ್ತು ಜನತೆಗೆ ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ತನ್ನ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಸುಲ್ತಾನಾಗೆ ಕೇರಳ ಹೈಕೋರ್ಟ್‌ ಒಂದು ವಾರದ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ನಿರೀಕ್ಷಣಾ ಜಾಮೀನು ತೀರ್ಪನ್ನು ಇನ್ನೂ ಕಾದಿರಿಸಿದೆ. ಹೀಗಾಗಿ ಅವರಿಗೆ ಕೊಂಚ ನಿರಾಳವಾಗುವಂತಾಗಿದೆ. ಕವರಟ್ಟಿ ಪೊಲೀಸ್‌ ಠಾಣೆ ನೀಡಿರುವ ನೋಟಿಸ್‌ ಗೆ ಭಾನುವಾರ ಪ್ರತಿಕ್ರಿಯಿಸುವಂತೆ ಕೋರ್ಟ್‌ ನಿರ್ದೇಶಿಸಿತ್ತು.

Join Whatsapp