ಕರಾಚಿ: ದುಬೈನಿಂದ ಪಂಜಾಬ್‌ನ ಅಮೃತಸರಕ್ಕೆ ಹಾರಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದೊಳಗಿದ್ದ ಪ್ರಯಾಣಿಕನಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇತ್ತು. ಪ್ರಯಾಣಿಕನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಏರ್ ಇಂಡಿಯಾ ವಿಮಾನ ಇನ್ನೂ ಭಾರತ ಗಡಿ ಪ್ರವೇಶಿಸಿರಲಿಲ್ಲ. ಹತ್ತಿರದ ವಿಮಾನ ನಿಲ್ದಾಣ ಕರಾಚಿ ಬಿಟ್ಟು ಬೇರೆ ಇರಲಿಲ್ಲ. ಹೀಗಾಗಿ ಅಧಿಕಾರಿಗಳು ಕರಾಚಿ ವಿಮಾನ ನಿಲ್ದಾಣವನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಭಾರತದ ಮನವಿಗೆ ಸ್ಪಂದಿಸಿದ ಕರಾಚಿ ವಿಮಾನ ನಿಲ್ದಾಣ ಅಧಿಕಾರಿಗಳು, ತಕ್ಷಣವೇ ಏರ್ ಇಂಡಿಯಾ ವಿಮಾನ ನಿಲ್ದಾಣ ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಿದ್ದಾರೆ.
ಮಧ್ಯಾಹ್ನ 12.30ಕ್ಕೆ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ವೈದ್ಯರ ತಂಡ ಪ್ರಯಾಣಿಕನಿಗೆ ನೆರವು ನೀಡಿದೆ. ಚಿಕಿತ್ಸೆ ಪಡೆದ ಬಳಿಕ ಕೆಲ ಹೊತ್ತಿನಲ್ಲಿ ಅನಾರೋಗ್ಯಕ್ಕೀಡಾದ ಪ್ರಯಾಣಿಕ ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸಿದ್ದಾರೆ.
ಪ್ರಯಾಣಿಕನ ಚೇತರಿಕೆ ಗಮನಿಸಿ ಕರಾಚಿ ವೈದ್ಯರ ತಂಡ ಮತ್ತೆ ಹಾರಾಟಕ್ಕೆ ಏರ್ ಇಂಡಿಯಾಗೆ ಅನುವು ನೀಡಿತು. 2.30ರ ವೇಳೆಗೆ ಏರ್ ಇಂಡಿಯಾ ವಿಮಾನ ಕರಾಚಿ ವಿಮಾನ ನಿಲ್ದಾಣದಿಂದ ಅಮೃತಸರದತ್ತ ಪ್ರಯಾಣ ಬೆಳೆಸಿದೆ.