Home ಟಾಪ್ ಸುದ್ದಿಗಳು 69 ವರ್ಷಗಳ ಬಳಿಕ ಮಾತೃ ಸಂಸ್ಥೆ ತೆಕ್ಕೆಗೆ ‘ಏರ್ ಇಂಡಿಯಾ’ !

69 ವರ್ಷಗಳ ಬಳಿಕ ಮಾತೃ ಸಂಸ್ಥೆ ತೆಕ್ಕೆಗೆ ‘ಏರ್ ಇಂಡಿಯಾ’ !

ನವದೆಹಲಿ; ‘ಜನಸಾಮಾನ್ಯರ ಏರ್ಲೈನ್ಸ್’ ಖ್ಯಾತಿಯ ಏರ್ ಇಂಡಿಯಾ ಸಂಸ್ಥೆಯು ಭಾರತ ಸರ್ಕಾರದ ಅಧೀನದಿಂದ ಅಧಿಕೃತವಾಗಿ ಬೇರ್ಪಟ್ಟಿದ್ದು, 69 ವರ್ಷಗಳ ಬಳಿಕ ಮಾತೃ ಸಂಸ್ಥೆಯಾದ ಟಾಟಾ ಸಮೂಹದಲ್ಲಿ ‘ಲ್ಯಾಂಡ್’ ಆಗಿದೆ.

ನವದೆಹಲಿಯ ಏರ್ ಇಂಡಿಯಾ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಹಸ್ತಾಂತರ ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಏರ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ರಂ ದೇವ್ ದತ್ ಅವರಿಂದ ಅಧಿಕೃತ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಬಳಿಕ ಮಾತನಾಡಿದ ಚಂದ್ರಶೇಖರನ್, ಏರ್ ಇಂಡಿಯಾವನ್ನು ವಿಶ್ವದರ್ಜೆಯ ವಿಮಾನಯಾನ ಸಂಸ್ಥೆಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದಿದ್ದಾರೆ.

ತನ್ನ ಪಾಲಿಗೆ ‘ಬಿಳಿ ಆನೆ’ಯಾಗಿದ್ದ ಏರ್ ಇಂಡಿಯಾ ಸಂಸ್ಥೆಯನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಹರಾಜು ಕರೆದಿತ್ತು. ಈ ಬಿಡ್‌ನಲ್ಲಿ ಭಾಗಿಯಾಗಿದ್ದ ಟಾಟಾ ಗ್ರೂಪ್‌ನ ಅಂಗಸಂಸ್ಥೆ ಟೆಲೆಸ್ ಪ್ರೈವೇಟ್ ಲಿಮಿಟೆಟ್ ಬರೋಬ್ಬರಿ 18 ಸಾವಿರ ಕೋಟಿ ರೂಪಾಯಿಗಳಿಗೆ ಏರ್ ಇಂಡಿಯಾವನ್ನು ಖರೀದಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು.

ಈ ಮೂಲಕ 69 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾ ತನ್ನ ಮಾತೃಸಂಸ್ಥೆಯ ಮಡಿಲಿಗೆ ಮರಳಿದೆ. 1932ರ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಿದ್ದ ಟಾಟಾ ಏರ್‌ಲೈನ್ಸ್ ಸಂಸ್ಥೆಯು 1953ರಲ್ಲಿ ರಾಷ್ಟ್ರೀಕೃತಗೊಂಡು ಏರ್ ಇಂಡಿಯಾ ಇಂಟರ್ನ್ಯಾಷನಲ್ ಆಗಿ ಬದಲಾಗಿತ್ತು.
ಏರ್ ಇಂಡಿಯಾ ಬಾಕಿ ಉಳಿಸಿಕೊಂಡಿರುವ 15, 300 ಕೋಟಿ ರೂಪಾಯಿ ಮೊತ್ತದಲ್ಲಿ ಮೊದಲ ಹಂತವಾಗಿ 2,700 ಕೋಟಿ ರೂಪಾಯಿಗಳನ್ನು ಟಾಟಾ ಸಂಸ್ಥೆ ನಗದು‌ ರೂಪದಲ್ಲಿ ಪಾವತಿಸಲಿದೆ.

Join Whatsapp
Exit mobile version