Home ಟಾಪ್ ಸುದ್ದಿಗಳು ಬಾಬರಿ ಮಸ್ಜಿದ್ ಧ್ವಂಸ ಪ್ರಕರಣ| ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ

ಬಾಬರಿ ಮಸ್ಜಿದ್ ಧ್ವಂಸ ಪ್ರಕರಣ| ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ

ಅಯೋಧ್ಯೆ: ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. 

ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ ಸೇರಿದಂತೆ ಇತರ ಆರೋಪಿಗಳನ್ನು ಸಿಬಿಐನ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ 2021ರ ಜ. 8ರಂದು ಅಯೋಧ್ಯೆಯ ನಿವಾಸಿಗಳಾದ ಹಾಜಿ ಮಹಬೂಬ್ ಮತ್ತು ಸಯ್ಯದ್‌ ಅಖ್ಲಾಕ್‌ ಅವರು ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಆದರೆ, ಈ ಅರ್ಜಿಯನ್ನು 2022ರ ನ. 9ರಂದು ಅಲಹಾಬಾದ್ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು ವಜಾಗೊಳಿಸಿತ್ತು.

‘ಬಾಬರಿ ಮಸೀದಿ ಧ್ವಂಸವನ್ನು ಕ್ರಿಮಿನಲ್ ಕೃತ್ಯ ಎಂದು ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಹಾಗಾಗಿ, ಈ ಪ್ರಕರಣದಲ್ಲಿ ಖುಲಾಸೆಗೊಂಡಿರುವವರ ವಿರುದ್ಧ ನಾವು ಖಂಡಿತವಾಗಿಯೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ’ ಎಂದು ಎಐಎಂಪಿಎಲ್‌ಬಿ ಕಾರ್ಯಕಾರಿ ಸದಸ್ಯ ಮತ್ತು ವಕ್ತಾರ ಸಯ್ಯದ್‌ ಖಾಸಿಲ್ ರಸೂಲ್ ಇಲ್ಯಾಸ್ ಹೇಳಿದ್ದಾರೆ.

‘ಐತಿಹಾಸಿಕ ಅಯೋಧ್ಯೆಯ ತೀರ್ಪು ನೀಡುವಾಗ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಪೀಠವು, ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಇದಕ್ಕೆ ಸಂಬಂಧಿಸಿದ ಆರೋಪಿಗಳು ಇನ್ನೂ ಕಾನೂನಿನ ವ್ಯಾಪ್ತಿಯಿಂದ ಹೊರಗಿದ್ದಾರೆ ಎಂಬುದಾಗಿ ಹೇಳಿತ್ತು’ ಎಂದೂ ಅವರು ತಿಳಿಸಿದ್ದಾರೆ.

Join Whatsapp
Exit mobile version