ನಿಜಗುಣಾನಂದ ಸ್ವಾಮೀಜಿಗೆ ಮತ್ತೆ ಕೊಲೆ ಬೆದರಿಕೆ ಪತ್ರ : ಪ್ರಕರಣ ದಾಖಲು

Prasthutha|

ಕಿತ್ತೂರು: ‌ ನಿಜಗುಣಾನಂದ ಸ್ವಾಮೀಜಿಗೆ ಮತ್ತೆ ಜೀವ ಬೆದರಿಕೆ ಪತ್ರ ಬಂದಿದ್ದು, ಸ್ವಾಮೀಜಿಯನ್ನು ಕೊಲೆ ಮಾಡುವುದಾಗಿ ಪತ್ರ ಬರೆಯಲಾಗಿದೆ.  

- Advertisement -

ಬಸವ ತತ್ವದ ಪ್ರಚಾರಕ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಗೆ ಅನಾಮಿಕನಿಂದ ಆಗಸ್ಟ್ 8ರಂದು ಕೊಲೆ ಬೆದರಿಕೆ ಪತ್ರ ಬಂದಿದ್ದು, ಕಿತ್ತೂರು ಪೊಲೀಸರಿಗೆ ಸ್ವಾಮೀಜಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.  

“2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, 2023ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ, ಬೇಗ ನಿನ್ನ ತಿಥಿ ಬಗ್ಗೆ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನ್ನ ಘೋರ ಹತ್ಯೆ ಆಗುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ. ಇನ್ನು ದಿನಗಳನ್ನು ಎಣಿಸು” ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ.

- Advertisement -

2020ರಲ್ಲಿಯೂ ಹತ್ಯೆ ಮಾಡುವುದಾಗಿ ಸ್ವಾಮೀಜಿಗೆ ಜೀವ ಬೆದರಿಕೆ ಪತ್ರವೊಂದು ಬಂದಿತ್ತು. ಇದೀಗ ಮತ್ತೆ ಜೀವ ಬೆದರಿಕೆ ಪತ್ರ ಬಂದಿದ್ದು, ಈವರೆಗೂ 5ಕ್ಕೂ ಹೆಚ್ಚು ಬಾರಿ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬರೆದಿದ್ದಾರೆ.

“ಕಳೆದ 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ. ಒಂದೇ ತರಹ ಬರಹದ ಪತ್ರಗಳು ಬೇರೆ ಬೇರೆ ಭಾಗಗಳಿಂದ ಬರುತ್ತಿವೆ. ಈಗಾಗಲೇ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ಸತತವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿವೆ. ಪತ್ರ ಬರೆಯುವವರ ಹಾಗೂ ನನ್ನ ಮಧ್ಯೆ ಯಾವುದೇ ದ್ವೇಷ ಇಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಇಂತಹ ಕೊಲೆ ಬೆದರಿಕೆ ಪತ್ರಗಳನ್ನು ನಾನು ‘ಪ್ರೇಮಪತ್ರ’ಗಳೆಂದು ಭಾವಿಸಿದ್ದೇನೆ. ನನಗೆ ಸಾವಿನ ಬಗ್ಗೆ ಭಯವಿಲ್ಲ, ಸೇವೆ ಮಾಡುವುದು ನಿಲ್ಲುತ್ತದೆ ಎನ್ನುವ ಕೊರಗಷ್ಟೇ. ನಾನು ಸಮಾಜದ ಮಗ. ಈ ರೀತಿಯ ಪತ್ರಗಳಿಂದ ಭಕ್ತರಲ್ಲಿ ಆತಂಕ ಸಹಜ. ಪೊಲೀಸರು, ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಪತ್ರದ ಬಗ್ಗೆ ನಿಜಗುಣಾನಂದ ಸ್ವಾಮೀಜಿ ತಿಳಿಸಿದ್ದಾರೆ.



Join Whatsapp
Exit mobile version