ಬೆಂಗಳೂರು: ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಮತ್ತು ಹಿರಿಯ ಸಚಿವರ ಸಭೆ ನಡೆಯಿತು.
ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಡಾ.ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆಯ ಬಳಿಕ ವಿವರ ನೀಡಿದ ಸಚಿವ ಆರ್. ಅಶೋಕ, ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಗಿ ವಿಚಕ್ಷಣೆ ಕೈಗೊಳ್ಳಲು ಆದೇಶ ನೀಡಲಾಗಿದೆ ಎಂದರು.
ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುವವರಿಗೆ ಆರ್.ಟಿ.ಪಿ.ಸಿ. ಆರ್. ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದ್ದು, ಗಡಿ ಜಿಲ್ಲೆಗಳಲ್ಲಿ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುವಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಎಲ್ಲ ಇಲಾಖೆಗಳ ಸಹಕಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು. ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7 ನೇ ದಿನಕ್ಕೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಬೇಕು. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಹೋಟೇಲು, ರೆಸ್ಟೋರೆಂಟ್ಗಳು, ಸಿನಿಮಾ ಹಾಲ್ ಗಳು, ಈಜುಗೊಳ, ಸಾರ್ವಜನಿಕ ಗ್ರಂಥಾಲಯ, ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳು, ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಪಡೆದಿರಬೇಕು. ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವುದು.
ಸರ್ಕಾರಿ ಕಚೇರಿಗಳಲ್ಲಿ ಹಾಗೂ ಮಾಲ್ ಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು. ಸರ್ಕಾರಿ ಕಚೇರಿ ಹಾಗೂ ಮಾಲ್ ಗಳಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗಳನ್ನು ತೀವ್ರಗೊಳಿಸುವುದು. ನೆಗಟಿವ್ ಇದ್ದವರಿಗೆ ನಗರ ಪ್ರವೇಶಕ್ಕೆ ಅನುಮತಿ ನೀಡಬೇಕು. ಪಾಸಿಟಿವ್ ಇದ್ದವರಿಗೆ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಶೋಕ್ ಮಾಹಿತಿ ನೀಡಿದರು.