►► ಲವ್ ಜಿಹಾದ್ ಮೊದಲಿನಿಂದಲೂ ಇದೆ ಎಂದ ಸಿಎಂ
ಉಡುಪಿ: ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಉಂಟಾಗಿರುವ ಸಮಸ್ಯೆ ಬಗ್ಗೆ ಸಮಗ್ರ ವರದಿ ಜೂನ್ 2ರಂದು ಕೈ ಸೇರಲಿದ್ದು ಅದನ್ನು ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಕೆಲವು ಸ್ವಾಮೀಜಿಗಳು, ಸಾಹಿತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ಲೇಖಕರು ತಮ್ಮ ಬರಹ ವಾಪಸ್ಸು ಪಡೆಯುವಂತೆ ಪತ್ರ ಬರೆದಿರುವವರನ್ನು ಕೂಡ ಪರಿಗಣಿಸಿ, ಅವರ ಜೊತೆಯೂ ಮಾತುಕತೆ ನಡೆಸಲಾಗುವುದು ಎಂದರು.
ಎಸಿಬಿ ಬಲವರ್ಧನೆ ಆಗಿದೆ. ಆದರೆ ತಾಂತ್ರಿಕವಾಗಿ ಲೋಕಾಯುಕ್ತಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಲು ಆಗುವುದಿಲ್ಲ. ಎಸಿಬಿ ಪ್ರಕರಣ ದಾಖಲಿಸಲು ಅವಕಾಶ ಇದೆ. ಮುಂದೆ ಈ ಬಗ್ಗೆ ಪರಿಶೀಸುವ ನಿಟ್ಟಿನಲ್ಲಿ ಎಲ್ಲ ವಿವರ ಪಡೆದು ಕೊಳ್ಳಲಾಗುವುದು. ಈ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದ್ದು, ಕಾದು ನೋಡೋಣ ಎಂದು ಅವರು ಹೇಳಿದರು.
ಕರಾವಳಿಯಲ್ಲಿನ ಲವ್ ಜಿಹಾದ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯ ಮಂತ್ರಿ, ಲವ್ ಜಿಹಾದ್ ಮೊದಲಿನಿಂದಲೂ ಇದೆ. ಈಗ ಸೃಷ್ಟಿಯಾಗಿರುವುದು ಅಲ್ಲ. ಅದಕ್ಕಾಗಿ ಕಾನೂನು ಮಾಡಿದ್ದೇವೆ. ಆ ಕಾನೂನಿನಡಿ ಎಲ್ಲವನ್ನು ಪರಿಗಣಿಸುತ್ತೇವೆ. ಯಾರಿಗೂ ಕಾನೂನು ಉಲ್ಲಂಘನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.