Home ಟಾಪ್ ಸುದ್ದಿಗಳು ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡದ ಸ್ಪೈಸ್‌ಜೆಟ್‌: ನೋಟಿಸ್ ಜಾರಿಗೊಳಿಸಿದ DGCA

ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡದ ಸ್ಪೈಸ್‌ಜೆಟ್‌: ನೋಟಿಸ್ ಜಾರಿಗೊಳಿಸಿದ DGCA

ನವದೆಹಲಿ: ಕಳೆದ 18 ದಿನಗಳಲ್ಲಿ ಎಂಟು ಬಾರಿ ತಾಂತ್ರಿಕ ಸಮಸ್ಯೆಯಿಂದಾಗಿ ಸ್ಪೈಸ್‌ಜೆಟ್‌ ವಿಮಾನವು ವಿವಿಧ ಕಡೆಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಿದ ಕಾರಣಕ್ಕಾಗಿ DGCA ನೋಟಿಸ್ ಜಾರಿಗೊಳಿಸಿದೆ.

ಕಳಪೆ ಆಂತರಿಕ ಸುರಕ್ಷತಾ ಮೇಲ್ವಿಚಾರಣೆ ಮತ್ತು ಅಸಮರ್ಪಕ ನಿರ್ವಹಣಾ ಕ್ರಮವನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದ್ದು, ಮೂರು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.

ನಿನ್ನೆ ಚೀನಾಕ್ಕೆ ಹಾರಾಟ ನಡೆಸುತ್ತಿದ್ದ ಸ್ಪೈಸ್‌ಜೆಟ್ ಸರಕು ವಿಮಾನದ ರಾಡಾರ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ಬಳಿಕ ಕೋಲ್ಕತ್ತಾಗೆ ಮರಳಿತ್ತು. ಕಳೆದ 18 ದಿನಗಳಲ್ಲಿ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಎಂಟನೇ ಘಟನೆ ಇದಾಗಿದೆ ಎಂದು DGCA ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿದಾದಿತ್ಯ ಎಂ. ಸಿಂಧಿಯಾ ಅವರು DGCA ಸೂಚನೆಯ ಪ್ರತಿಯನ್ನು ಟ್ವೀಟ್ ಮಾಡಿದ್ದು, ಪ್ರಯಾಣಿಕರ ಸುರಕ್ಷತೆಯು ಅತೀ ಮುಖ್ಯವಾಗಿದೆ. ಸುರಕ್ಷತೆಗೆ ಅಡ್ಡಿಯಾಗುವ ಸಣ್ಣ ಪ್ರಮಾಣದ ದೋಷವನ್ನು ಕೂಡ ಕೂಲಂಕಷವಾಗಿ ತನಿಖೆ ನಡೆಸಲಾಗುವುದೆಂದು ತಿಳಿಸಿದರು.

ಈ ಮಧ್ಯೆ ಕಳೆದ ಮೂರು ವರ್ಷಗಳಿಂದ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ನಷ್ಟದ ಹಾದಿಯಲ್ಲಿದೆ ಎಂಬ ಮಾಹಿತಿ ಹೊರಬಿದ್ದಿದೆ. 2018-19, 2019-20 ಮತ್ತು 2020-21 ರಲ್ಲಿ ಕ್ರಮವಾಗಿ 316 ಕೋಟಿ ರೂ., 934 ಕೋಟಿ ರೂ., 998 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version