Home ಕ್ರೀಡೆ ವಿಶ್ವಕಪ್ ಟೂರ್ನಿಯ ನಡುವೆಯೇ ನಿವೃತ್ತಿ ಘೋಷಿಸಿದ ಸ್ಟಾರ್ ಬ್ಯಾಟ್ಸ್’ಮನ್

ವಿಶ್ವಕಪ್ ಟೂರ್ನಿಯ ನಡುವೆಯೇ ನಿವೃತ್ತಿ ಘೋಷಿಸಿದ ಸ್ಟಾರ್ ಬ್ಯಾಟ್ಸ್’ಮನ್

ಅಬುಧಾಬಿ: ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮಧ್ಯದಲ್ಲಿಯೇ ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಅಫ್ಗಾನ್ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಭಾನುವಾರ ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಮೀಬಿಯಾ ವಿರುದ್ಧ, 33 ವರ್ಷದ ಅಸ್ಗರ್ ಅಪ್ಘಾನ್ ತಮ್ಮ ಕೊನೇಯ ಪಂದ್ಯವನ್ನಾಡಲಿದ್ದಾರೆ. ಗ್ರೂಪ್ ಹಂತದಲ್ಲಿ ಅಫ್ಘಾನಿಸ್ತಾನ ಭಾರತ ಹಾಗೂ ನ್ಯೂಜಿಲಂಡ್ ತಂಡಗಳ ವಿರುದ್ಧ ಪಂದ್ಯವನ್ನಾಡಲಿದೆ. ಆದರೆ ಆ ಎರಡು ಪಂದ್ಯಗಳಲ್ಲಿ ತಾನು ಮೈದಾನಕ್ಕಿಳಿಯುವುದಿಲ್ಲ ಎಂದು ಅಫ್ಘಾನ್’ನ ಮಾಜಿ ಕಪ್ತಾನ ತಿಳಿಸಿದ್ದಾರೆ.


2009ರಲ್ಲಿ ಅಫ್ಘಾನಿಸ್ತಾನ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅಸ್ಗರ್, ತಂಡದ ನಾಯಕನಾಗಿ ಟಿ-20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಗೆಲುವು (42 ಪಂದ್ಯ) ತಂದುಕೊಟ್ಟ ನಾಯಕನೆಂಬ ದಾಖಲೆ ಹೊಂದಿದ್ದಾರೆ. 33 ವರ್ಷದ ಅಸ್ಗರ್ ಅಪ್ಘಾನ್ ಅಫ್ಘಾನಿಸ್ತಾನ ತಂಡದ ಪರವಾಗಿ 115 ಏಕದಿನ, 74 ಟಿ-20 ಹಾಗೂ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಒಟ್ಟು 2467 ರನ್ 6 ಟೆಸ್ಟ್ ಪಂದ್ಯಗಳಲ್ಲಿ 440 ರನ್ ಹಾಗೂ ಟಿ-20 ಕ್ರಿಕೆಟ್’ನಲ್ಲಿ 1327 ರನ್ ಕಲೆಹಾಕಿದ್ದಾರೆ. 2 ಶತಕ ಅಫ್ಘಾನ್ ಹೆಸರಿನಲ್ಲಿದೆ.


ಅಫ್ಘಾನಿಸ್ತಾನದ ಪರ ಟಿ-20 ಕ್ರಿಕೆಟ್’ನಲ್ಲಿ ಅತಿಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಅಸ್ಗರ್ 3ನೇ ಹಾಗೂ ಏಕದಿನ ಕ್ರಿಕೆಟ್;ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ 12, ಟಿ-20ಯಲ್ಲಿ 4 ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ 2 ಅರ್ಧಶತಕಗಳು ಅಸ್ಗರ್ ಹೆಸರಿನಲ್ಲಿದೆ.

Join Whatsapp
Exit mobile version