► ಸೆಮಿಫೈನಲ್ ಹಾದಿ ಸುಗಮ !
ದುಬೈ; ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್’ನಲ್ಲಿರುವ ಪಾಕಿಸ್ತಾನ ತಂಡ ಹ್ಯಾಟ್ರಿಕ್ ಗೆಲುವಿನ ಮೂಲಕ ಸೆಮಿಫೈನಲ್ಸ್ ಹಾದಿಯನ್ನು ಸುಗಮಗೊಳಿಸಿದೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 18 ಓವರ್’ವರೆಗೂ ಗೆಲುವಿನ ಹಾದಿಯಲ್ಲಿದ್ದ ಅಫ್ಘಾನಿಸ್ತಾನ, 20ನೇ ಓವರ್ ಎಸೆಯುವ ಮುನ್ನವೇ ಪಾಕಿಸ್ತಾನಕ್ಕೆ ಗೆಲುವಿನ ಉಡುಗೊರೆ ನೀಡಿದ್ದು ಅಭಿಮಾನಿಗಳನ್ನು ನಿರಾಸೆಗೆ ತಳ್ಳಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 147 ರನ್’ಗಳಿಸಿತ್ತು.
ಚೇಸಿಂಗ್’ವೇಳೆ ಕೊನೆಯ 3 ಓವರ್‌ಗಳಲ್ಲಿ ಪಾಕ್ ಗೆಲುವಿಗೆ 26 ರನ್’ಗಳ ಅಗತ್ಯವಿತ್ತು.
ಅಫ್ಘಾನಿಸ್ತಾನದ ಪರ 18ನೇ ಓವರ್ ಎಸೆದ ನವೀನ್ ಉಲ್ ಹಖ್ ಅದ್ಭುತ ಬೌಲಿಂಗ್ ಸಂಘಟಿಸಿ ಕೇವಲ 2 ರನ್ ನೀಡಿ ಶೊಯೆಬ್ ಮಲಿಕ್ ವಿಕೆಟ್ ಪಡೆಯುವ ಮೂಲಕ ಅಫ್ಘಾನ್ ಗೆಲುವಿಗೆ ಅಡಿಪಾಯ ಹಾಕಿದ್ದರು. ಹೀಗಾಗಿ ಕೊನೆಯ 2 ಓವರ್‌ಗಳಲ್ಲಿ ಪಾಕಿಸ್ತಾನ ಗೆಲುವಿಗೆ 24 ರನ್ ಅಗತ್ಯವಿತ್ತು. ಆದರೆ ಮುಂದಿನ ಓವರ್ ಎಸೆದ ಕರೀಮ್ ಜನ್ನತ್ ಅಫ್ಘಾನ್ ಪಾಲಿಗೆ ವಿಲನ್ ಆದರು.
19ನೇ ಓವರ್’ನಲ್ಲಿ ಸ್ಟ್ರೈಕ್’ನಲ್ಲಿದ್ದ ಆಸಿಫ್ ಅಲಿ 4 ಭರ್ಜರಿ ಸಿಕ್ಸರ್’ಗಳನ್ನು ಸಿಡಿಸುವ ಮೂಲಕ ಇನ್ನೂ 1 ಓವರ್ ಬಾಕಿ ಇರುವಂತೆಯೇ ತಂಡಕ್ಕೆ ಅಮೋಘ ಗೆಲುವು ತಂದಿತ್ತರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ, ಆರಂಭ ನೀರಸವಾಗಿತ್ತು. ಆದರೆ ಕೊನೆಯಲ್ಲಿ ನಾಯಕ ಮೊಹಮ್ಮದ್ ನಬಿ ಹಾಗೂ ಗುಲ್ಬಾದಿನ್ ನಾಯಿಬ್ ತಲಾ 35 ರನ್’ಗಳಿಸುವ ಮೂಲಕ ತಂಡಕ್ಕೆ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ನೆರವಾದರು. ಪಾಕಿಸ್ತಾನ ಪರ ಇಮಾದ್ ವಾಸಿಂ 2 ವಿಕೆಟ್ ಪಡೆದರೆ, ಉಳಿದ ನಾಲ್ವರು ತಲಾ 1 ವಿಕೆಟ್ ಪಡೆದರು.
ಚೇಸಿಂಗ್ ವೇಳೆ ಆರಂಭಿಕ ರಿಜ್ವಾನ್ ವಿಕೆಟ್ ಬೇಗನೆ ನಷ್ಟವಾದರೂ ನಾಯಕ ಬಾಬರ್ ಅಜಮ್ ಆಕರ್ಷಕ ಅರ್ಧ ಶತಕ ದಾಖಲಿಸಿ ತಂಡವನ್ನು ಗೆಲುವಿನ ಟ್ರ್ಯಾಕ್’ಗೆ ತಂದು ನಿಲ್ಲಿಸಿದ್ದರು.
17 ನೇ ಓವರ್’ನ ಕೊನೆಯ ಎಸೆತದಲ್ಲಿ ರಶೀದ್ ಖಾನ್ ಬಾಬರ್ ಅಝಮ್ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನ ಕುತೂಹಲ ಘಟ್ಟಕ್ಕೆ ಕೊಂಡೊಯ್ದರೂ , 19ನೇ ಓವರ್’ನಲ್ಲಿ ಅಫ್ಘಾನ್ ಲೆಕ್ಕಾಚಾರವನ್ನು ಆಸಿಫ್ ಅಲಿ ತಲೆಕೆಳಗಾಗಿಸಿದ್ದರು.
ರಶೀದ್ ಖಾನ್ 2 ವಿಕೆಟ್ ಪಡೆದರೆ ಉಳಿದ ಮೂವರು ಬೌಲರ್‌ಗಳು ತಲಾ 1 ವಿಕೆಟ್ ಪಡೆದರು.
ರಶೀದ್ ಖಾನ್ ದಾಖಲೆ
ಮೊಹಮ್ಮದ್ ಹಫೀಝ್ ವಿಕೆಟ್ ಪಡೆಯುವ ಮೂಲಕ ರಶೀದ್ ಖಾನ್ ಟಿ-20 ಕ್ರಿಕೆಟ್ ನಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ 100 ವಿಕೆಟ್’ಪಡೆದ ಅತೀ ಕಿರಿಯ ಬೌಲರ್ ಎನಿಸಿದರು. ತನ್ನ 53ನೇ ಟಿ-20 ಪಂದ್ಯದಲ್ಲಿ ರಶೀದ್ ಖಾನ್ 100 ಪಡೆದವರ ಕ್ಲಬ್ ಸೇರಿದರು. ಇದಕ್ಕೂ ಮೊದಲು ಟಿ-20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದವರ ಪಟ್ಟಿಯನ್ನು ನೋಡುವುದಾದರೆ ಶಕೀಬ್ ಅಲ್ ಹಸನ್ [117 ವಿಕೆಟ್ ], ಲಸಿತ್ ಮಲಿಂಗ [107 ವಿಕೆಟ್ ], ಟಿಮ್ ಸೌಥಿ [100 ವಿಕೆಟ್ ] ಪಡೆದಿದ್ದಾರೆ.