ಅಡ್ಯನಡ್ಕ: ಶೈಕ್ಷಣಿಕ ಕಾರ್ಯಾಗಾರಕ್ಕೆ ಶಾಲಾ ಮಕ್ಕಳನ್ನು ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅಡ್ಯನಡ್ಕ ಎಜ್ಯುಕೇಶನ್’ನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಫೆ.18 ರಂದು 10ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿಯ ಅವಗಾಹನೆಗೆ ತಾರದೆ ಶೈಕ್ಷಣಿಕ ಕಾರ್ಯಾಗಾರಕ್ಕೆ ಕಳುಹಿಸಿದ್ದಾರೆ ಎಂದು ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿ ಅಡ್ಯನಡ್ಕ ಎಜ್ಯುಕೇಶನ್ ನ ಕಾರ್ಯದರ್ಶಿ ಆದೇಶಿಸಿದ್ದಾರೆ..
ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತದ ಬಗ್ಗೆ ಮತ ಪ್ರವಚನ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಅಕ್ರಮವಾಗಿ ಕಾರ್ಯಾಗಾರಕ್ಕೆ ನುಗ್ಗಿ ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ ಘಟನೆ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಠಾಣೆಗೆ ಭೇಟಿ ನೀಡಿ ಆಗ್ರಹಿಸಿದ್ದರು.
ನುಸ್ರುತುಲ್ ಇಸ್ಲಾಮಿಕ್ ಯಂಗ್ ಮೆನ್ಸ್ ಅಸೋಸಿಯೇಷನ್ (NIYA) ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ಅಡ್ಯನಡ್ಕ ಜನತಾ ಹೈಸ್ಕೂಲ್ ನ ವಿದ್ಯಾರ್ಥಿಗಳನ್ನು ತೆರಳುವಂತೆ ಸೂಚಿಸಿದ್ದ ಶಾಲಾ ಪ್ರಾಂಶುಪಾಲರಾದ ರುದ್ರಪ್ಪ ನಾಯ್ಕ್ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ಠಾಣೆಯಲ್ಲಿ ಆಯೋಜಕರ ವಿರುದ್ಧ ಹಾಗೂ ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಹಲವು ವರ್ಷಗಳಿಂದ ಅಡ್ಯನಡ್ಕದಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಟಿ.ಆರ್.ನಾಯಕ್ ಅವರಿಗೆ ಶೈಕ್ಷಣಿಕ ರಂಗದಲ್ಲಿ ಒಳ್ಳೆಯ ಹೆಸರಿದ್ದು, ಸಾವಿರಾರು ವಿದ್ಯಾರ್ಥಿಗಳು ಇವರಿಂದ ವಿದ್ಯೆ ಕಲಿತಿದ್ದಾರೆ. ಸೌಹಾರ್ದತೆ, ಸಮಾನತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ನಾಯಕ್ ಅವರನ್ನು ಷಡ್ಯಂತರದಲ್ಲಿ ಸಿಲುಕಿಸಿ ಅಮಾನತು ಮಾಡಲಾಗಿದೆ ಎಂದು ಅಡ್ಯನಡ್ಕದ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ದೂರಿದ್ದಾರೆ.