ಜಾರಕಿಹೊಳಿಗೆ ಕರೋನಾ ಪಾಸಿಟಿವ್; ಸಂತ್ರಸ್ತೆ ಯುವತಿಪರ ವಕೀಲರು ಹೇಳಿದ್ದೇನು?

Prasthutha|

ಬೆಂಗಳೂರು: ಮಾಜಿ ಸಚಿವ , ಶಾಸಕ ರಮೇಶ್ ಜಾರಕಿಹೊಳಿಗೆ ಕರೋನಾ ಪಾಸಿಟಿವ್ ಬಂದಿದೆ ಎಂದು ಸಚಿವ ಬೈರತಿ ಬಸವರಾಜ್ ಬೆಳಗಾವಿಯಲ್ಲಿ ಇಂದು ಹೇಳಿಕೆ ನೀಡಿದ್ದು ಜಾರಕಿಹೊಳಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಯುವತಿ ಪರ ವಕೀಲರಾದ ಕೆ.ಎನ್. ಜಗದೀಶ್ ಮಹಾದೇವ್ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ವಕೀಲರಾದ ಜಗದೀಶ್ ಮಾತನಾಡುತ್ತಾ, ನಾವು ಕಳೆದ ಮೂರು ದಿವಸಗಳಿಂದ ಹೇಳುತ್ತಿದ್ದೇವೆ ಮತ್ತು ನಿನ್ನೆಯೂ ಹೇಳಿದ್ದೇವೆ. ಕರೋನಾ ಪಾಸಿಟಿವ್ ಬರುತ್ತೆ ಮತ್ತು ಆ ಹೆಸರಿನಲ್ಲಿ ಎಸ್ಕೇಪ್ ಆಗುತ್ತಾರೆ ಎಂದು. ಬಂಧನವಾಗುತ್ತದೆ ಎಂಬ ಭಯ ಜಾರಕಿಹೊಳಿಯನ್ನು ಸಿಕ್ಕಾಪಟ್ಟೆ ಕಾಡುತ್ತಿದೆ. ಅದೇ ರೀತಿ ತನಿಖೆಯನ್ನೂ ವಿಳಂಬ ಮಾಡಬೇಕು. ಅದಲ್ಲದೆ ಎಸ್.ಐ.ಟಿ ಕೂಡಾ ಇದಕ್ಕೆ ಸಹಕರಿಸುತ್ತಿದೆ. ನೋಡಿ, ಎಸ್.ಐ.ಟಿ. ಅಧಿಕಾರಿಗಳು ಆರೋಪಿ ಬರದಿದ್ದರೂ ಅವರನ್ನು ಹುಡುಕಿ ತರಬೇಕು ಎಂಬುವುದು ನಿಯಮ. ಈ ಪ್ರಕರಣದಲ್ಲಿ ಅದು ಎಲ್ಲೂ ನಡೆದಿಲ್ಲ. ಒಂದು ವೇಳೆ ಸಾಮಾನ್ಯ ಜನರನ್ನು ಎಸ್.ಐ.ಟಿ ಅಧಿಕಾರಿಗಳು ಬಿಟ್ಟು ಬಿಡ್ತಾರಾ? ಎಂದು ಪ್ರಶ್ನಿಸಿರುವ ಜಗದೀಶ್, ಅವರುನ್ನು ಹುಡುಕಿ ಕೋಲಾ ಹಾಕಿ ತರುತ್ತಿದ್ದರು ಎಂದು ಹೇಳಿದ್ದಾರೆ.

- Advertisement -

‘ಸರಕಾರ ಆರೋಪಿಯ ಪರ ನಿಂತಿದೆ ಎಂದಾಗ ಇದನ್ನು ನಾವು ನಿರೀಕ್ಷಿಸಿದ್ದೆವು. ನೋಡಿ ಇದು ರಾಜ್ಯದ ಅವಸ್ಥೆ. ಒಂದು ಸರಕಾರವೇ ಆರೋಪಿಯ ಪರ ನಿಲ್ಲುತ್ತೆ ಅಂದರೆ ನ್ಯಾಯ ನಿರೀಕ್ಷಿಸಬಹುದಾ? ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಾರೆ ಕ್ಲೀನ್ ಚಿಟ್ ಎಂದು. ಒಂದು ಸರಕಾರವೇ ಕ್ಲೀನ್ ಚಿಟ್ ನೀಡಲು ಸಿದ್ಧವಾಗಿದೆ ಎಂದರೆ ಅವರನ್ನು ಬಂಧಿಸುವುದು ಕೇವಲ ಕನಸು. ಸರಕಾರ ಯಾವುದೇ ಕಾರಣಕ್ಕೆ ಜಾರಕಿಹೊಳಿಯನ್ನು ಬಂಧಿಸುವುದಿಲ್ಲ. ನಮಗೆ ಗೊತ್ತಿದೆ ಇವರ  ಡ್ರಾಮಾಗಳು. ಈ ಡ್ರಾಮಾದಲ್ಲಿ ಸರಕಾರ, ಗೃಹ ಇಲಾಖೆ, ಎಸ್.ಐ.ಟಿ. ಯ ಕೆಲವು ಅಧಿಕಾರಿಗಳು ಶಾಮೀಲಾಗಿ ಆರೋಪಿಗೆ ಈ ರೀತಿಯ ಪೂರಕ ವಾತಾವರಣವನ್ನು ನೀಡುತ್ತಿದ್ದಾರೆ. ಇದು ನ್ಯಾಯಾಲಯಕ್ಕೆ ಮಾಡುತ್ತಿರುವ ಅವಮಾನ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಕಳಂಕ.

ಇನ್ನು ಬೆಳಗಾವಿ ಆಸ್ಪತ್ರೆಯಲ್ಲಿ ಜಾರಕಿಹೊಳಿ ಚಿಕಿತ್ಸೆ ಪಡೆಯುವ ಬಗ್ಗೆ ಪ್ರತಿಕ್ರಿಯಿಸಿರುವ ಜಗದೀಶ್, ಒಬ್ಬ ಶಾಸಕನೆಂದು ಒಂದು ಸರಕಾರವನ್ನು ದುರುಪಯೋಗ ಮಾಡಲಾಗುತ್ತಿದೆ ಎಂದರೆ ಕೇವಲ ಒಂದು ಆಸ್ಪತ್ರೆ ಮಿಸ್ ಯೂಸ್ ಮಾಡಲ್ಲ ಅನ್ನುವುದಕ್ಕೆ ಏನು ಗ್ಯಾರಂಟಿ? ಸರಕಾರಿ ಆಸ್ಪತ್ರೆ ಸರಕಾರದಡಿಯಲ್ಲೇ ಬರುತ್ತೆ. ವಕೀಲರಾಗಿ ವೃತ್ತಿಯನ್ನು ನಿರ್ವಹಿಸುತ್ತಿರುವ ನಮಗೆನೇ ಪ್ರೆಸರ್ ಹಾಕಲಾಗುತ್ತೆ ಎಂದರೆ ವೈದ್ಯರನ್ನು ಬಿಡ್ತಾರಾ? ಅಲ್ಲಿ ಕೂಡಾ ಇದೆ ನಡೆಯುತ್ತೆ. ಜಾರಕಿಹೊಳಿ ಬಂಧನವಾಗ್ತಾರೆ ಅನ್ನುವುದು ಅವರಿಗೆ ಗೊತ್ತಿದೆ. ಆದರೆ ಎಸ್.ಐ.ಟಿ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂದರೆ ನಮಗೇನು ಮಾಡಲು ಸಾಧ್ಯ? ಎಸ್.ಐ.ಟಿ. ಯು ಆರೋಪಿ ಪರವಾಗಿರುವ ಟೀಮ್ ಆಗಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಎಲ್ಲರೂ ಕೆಟ್ಟವರು ಎಂದು ನಾನು ಹೇಳಲ್ಲ. ಅಲ್ಲೂ ತುಂಬಾ ಒಳ್ಳೆಯ ಅಧಿಕಾರಿಗಳಿದ್ದಾರೆ. ಅದೇ ಇವರಂತಹ ಕೆಟ್ಟವರೂ ಇದ್ದಾರೆ. ಇಲ್ಲಿ ಹಣವಿದ್ದವರು ಹೀರೋಗಳು. ಹಣವಿದ್ದವರಿಗೆ ಇಲ್ಲಿ ನ್ಯಾಯ. ಬಡವರಿಗೆ, ಸಾಮಾನ್ಯ ಜನತೆಗೆ ಇಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇಂದು ಸಂದೇಶ ನೀಡಿದೆ. ಇದು ಕರ್ನಾಟಕ ಜನತೆಯ ಹಣೆಬರಹ. ಅನುಭವಿಸಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನೀಡಿದರೆ ಚಿನ್ನ ರಸ್ತೆ ಬರುತ್ತೆ ಎಂದು ಹೇಳಿ ಜನರನ್ನು ಮೂರ್ಖರನ್ನಾಗಿ ಮಾಡಿದರು, ಚಿನ್ನದ ರಸ್ತೆಯೂ ಇಲ್ಲ. ನ್ಯಾಯವೂ ಇಲ್ಲ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಜಗದೀಶ್ ಹೇಳಿದ್ದಾರೆ.

- Advertisement -