ನವದೆಹಲಿ: ಸಾರ್ವಜನಿಕರ ವಿರೋಧದ ನಡುವೆಯೂ ದ್ವೇಷ ಭಾಷಣಕ್ಕೆ ಕುಖ್ಯಾತಿ ಪಡೆದಿರುವ ವಕೀಲೆ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಗೌರಿ ಅವರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಬಗ್ಗೆ ದ್ವೇಷ ಭಾಷಣ ಮಾಡಿ ಕುಖ್ಯಾತಿ ಪಡೆದಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಕೆ ಎಂ ಜೋಸೆಫ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಕೊಲಿಜಿಯಂ, ಜನವರಿ 17ರಂದು ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ಆಯ್ಕೆ ಮಾಡುವ ಶಿಫಾರಸು ಮಾಡಿತ್ತು.
“ನ್ಯಾಯಾಂಗವು ಕಾರ್ಯಾಂಗದಿಂದ ಅಭೂತಪೂರ್ವ ಮತ್ತು ಅನಗತ್ಯ ಟೀಕೆಗಳನ್ನು ಎದುರಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ, ಇಂತಹ ನೇಮಕಾತಿಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲು ದಾರಿ ಮಾಡಿಕೊಡಬಹುದು ಎಂದು ನಾವು ಭಯಪಡುತ್ತಿರುವುದರಿಂದ ನಾವು ಮುಂಚಿತವಾಗಿ ಪತ್ರ ಬರೆಯುತ್ತಿದ್ದೇವೆ. ಈ ಹಂತದಲ್ಲಿ, ತನ್ನದೇ ಆದ ಆಡಳಿತಾತ್ಮಕ ಕ್ರಮದಿಂದ ಸಂಸ್ಥೆ ದುರ್ಬಲಗೊಳ್ಳದಂತೆ ರಕ್ಷಿಸುವುದು ಅತ್ಯಂತ ನಿರ್ಣಾಯಕವಾಗಿದೆ” ಎಂದು ವಕೀಲರ ಗುಂಪು ಈ ಹಿಂದೆ ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಬರೆದ ಪತ್ರದಲ್ಲಿ ತಿಳಿಸಿತ್ತು.