ಜಾರ್ಖಂಡ್: ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಾಬುರಾಲ್ ಮರಾಂಡಿ ಅವರ ಆಪ್ತ ಸಹಾಯಕ ಸುನಿಲ್ ತಿವಾರಿಯನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ಅಪ್ರಾಪ್ತ ವಯಸ್ಸಿನ ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಂಚಿ ಮೂಲದ ಬಾಲಕಿಯನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪರಕಣ ದಾಖಲಿಸಲಾಗಿದೆ. ಮಧ್ಯಂತರ ಜಾಮೀನಿಗಾಗಿ ಸಲ್ಲಿಸಿದ್ದ ಮನವಿಯನ್ನು ರಾಂಚಿ ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆತ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.
ಅಶೋಕ ನಗರದಲ್ಲಿ ತಿವಾರಿಯ ನಿವಾಸದಲ್ಲಿ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ಕುಂತಿ ಎಂಬಲ್ಲಿನ ಬುಡಕಟ್ಟು ಸಮುದಾಯದ ಬಾಲಕಿ ಮೇಲೆ, ತಿವಾರಿ ಅತ್ಯಾಚಾರವೆಸಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಂಚಿಯ ಅರ್ಗೋರಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿತ್ತು.
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮಾರ್ಚ್ 2020 ರಂದು ಮೊದಲ ಬಾರಿಗೆ ದೌರ್ಜನ್ಯವೆಸಗಲಾಗಿತ್ತು. ಕೋವಿಡ್ ನಿರ್ಬಂಧದಿಂದಾಗಿ ಆಕೆಯನ್ನು ತಿವಾರಿ ಮನೆಯಿಂದ ಹೊರಗೆ ಹೋಗಲು ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಲವು ತಿಂಗಳ ಬಳಿಕ ಕುಂತಿಯ ತನ್ನ ಕುಟುಂಬದೊಂದಿಗೆ ತನ್ನ ಮೇಲಾಗಿರುವ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಳು. ಬಳಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು ಎಂದು ತಿಳಿದುಬಂದಿದೆ.
ಆರೋಪಿ ಸುನಿಲ್ ತಿವಾರಿ ಬಂಧನಕ್ಕೆ ರಾಂಚಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಇಂದು ಬೆಳಗ್ಗೆ ಆತನನ್ನು ಆಗ್ರಾ-ನವದೆಹಲಿ ಮಧ್ಯದಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಔಪಚಾರಿಕತೆಯನ್ನು ಪೂರ್ತಿಗೊಂಡ ನಂತರ ಆತನನ್ನು ರಾಂಚಿಗೆ ಕರೆತರಲಾಗುವುದೆಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.