►ಅಂಗನವಾಡಿ ಕಾರ್ಯಕರ್ತೆಯರನ್ನು ಜಾಹೀರಾತು ಸರಕು ಮಾಡಲು ಹೊರಟ ಸರ್ಕಾರ
ದಾವಣಗೆರೆ: ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಸಮವಸ್ತ್ರ ಸೀರೆಯ ಅಂಚಿನ ಮೇಲೆ ಪೋಷಣ್ ಅಭಿಯಾನದ ಜಾಹೀರಾತು ಮುದ್ರಿಸಿರುವುದಕ್ಕೆ ಕಾರ್ಯಕರ್ತೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಎರಡು ವರ್ಷಗಳಿಂದ ಸಮವಸ್ತ್ರವನ್ನೇ ನೀಡಿಲ್ಲ. ಇದೀಗ ಕೇಂದ್ರ ಸರ್ಕಾರವು ಪೋಷಣೆ ಅಭಿಯಾನಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮವಸ್ತ್ರ ವಿತರಣೆ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರ ನೀಡುವ ಸಮವಸ್ತ್ರ ಸೀರೆಯ ಮೇಲೆ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನದ ಜಾಹೀರಾತು ಮುದ್ರಿಸಿರುವುದಕ್ಕೆ ಕಾರ್ಯಕರ್ತೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ಸೀರೆ ಉಡಲು ಅಂಗನವಾಡಿ ಕಾರ್ಯ ಕರ್ತೆಯರು ವಿರೋಧ ವ್ಯಕ್ತಪಡಿಸಿದ್ದು ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರತಿ ತಿಂಗಳ ಮೊದಲ ಹಾಗೂ ಎರಡನೇ ಶುಕ್ರವಾರದಂದು ನಡೆಯುವ ಅನ್ನಪ್ರಾಶನ ಮತ್ತು ಸೀಮಂತ ಕಾರ್ಯಕ್ರಮ, ಗರ್ಭಿಣಿಯರ ಆರೈಕೆ ಪೌಷ್ಟಿಕ ಶಿಬಿರ, ಸಮುದಾಯ ಕಾರ್ಯ- ಕ್ರಮಗಳಲ್ಲಿ ಸಮವಸ್ತ್ರ ಧರಿಸುವಂತೆ ಸೂಚಿಸಲಾಗಿದೆ.