Home ಟಾಪ್ ಸುದ್ದಿಗಳು ಮುಸ್ಲಿಂ ಸಮಾಜ ಎಂದಿಗೂ ಕೂಡ ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗಿಲ್ಲ, ಅದಕ್ಕೆ ಇಸ್ಲಾಂನಲ್ಲಿ ಅವಕಾಶವೂ ಇಲ್ಲ: ಅಬ್ದುಲ್...

ಮುಸ್ಲಿಂ ಸಮಾಜ ಎಂದಿಗೂ ಕೂಡ ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗಿಲ್ಲ, ಅದಕ್ಕೆ ಇಸ್ಲಾಂನಲ್ಲಿ ಅವಕಾಶವೂ ಇಲ್ಲ: ಅಬ್ದುಲ್ ಮಜೀದ್ ಮೈಸೂರು

ಮೋಹನ್ ಭಾಗವತ್ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ

ಬೆಂಗಳೂರು: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಸ್ಲಿಮರು ತಮ್ಮ ಶ್ರೇಷ್ಠತೆಯ ನಿರೂಪಣೆ ತ್ಯಜಿಸಬೇಕು ಎಂದು ಹೇಳಿದ್ದಾರೆ. ಮುಸ್ಲಿಂ ಸಮಾಜ ಎಂದಿಗೂ ಕೂಡ ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗಿಲ್ಲ. ಅದಕ್ಕೆ ಇಸ್ಲಾಂನಲ್ಲಿ ಅವಕಾಶವೂ ಇಲ್ಲ. ಮೋಹನ್ ಭಾಗವತ್ ಅವರ ಈ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆಕ್ಷೇಪಿಸಿದ್ದಾರೆ.


ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಸ್ಲಾಂ ಧರ್ಮ ಜಗತ್ತಿನಲ್ಲಿಯೇ ಅತ್ಯಂತ ಸಮಾನತೆಯನ್ನು ಸಾರುವ ಧರ್ಮವಾಗಿದೆ. ಇಲ್ಲಿ ವರ್ಣಭೇದ, ವರ್ಗಭೇದ ಅಥವಾ ಯಾವುದೇ ರೀತಿಯ ಮನುಷ್ಯ ಮನುಷ್ಯನ ನಡುವೆ ಭೇದಕ್ಕೆ ಅವಕಾಶವಿಲ್ಲ. ಪ್ರವಾದಿ ಮುಹಮ್ಮದರು ಮೊದಲ ಬಾರಿಗೆ (ಬಾಂಗ್) ಆಝಾನ್ ಕೂಗಿಸಿದ್ದು ಕೂಡ ಒಬ್ಬ ಕರಿಯ ಜನಾಂಗದ ವ್ಯಕ್ತಿಯಾದ ಬಿಲಾಲ್ ಅವರ ಮೂಲಕ. ಇಂತಹ ಸಮಾಜವನ್ನು ಶ್ರೇಷ್ಠತೆಯ ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ದೂಷಿಸುವುದು ಮುಸ್ಲಿಮರನ್ನು ವಿನಾಕಾರಣ ಆರೋಪಿಸುವ ಉದ್ದೇಶದಿಂದ ಮಾತ್ರ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಸೀದಿಯ ಒಳಗೆ ಒಬ್ಬ ಬಡ ಕೂಲಿ ಕಾರ್ಮಿಕ ಮತ್ತು ಸಾಮ್ರಾಜ್ಯದ ದೊರೆ ತೋಳಿಗೆ ತೋಳು ತಾಕಿಸಿ ನಮಾಝ್ ನಿರ್ವಹಿಸುತ್ತಾರೆ. ದೇವಸ್ಥಾನಗಳಲ್ಲಿ ಇರುವಂತೆ ಪಂಕ್ತಿಭೇದ, ವಿಐಪಿ ದ್ವಾರ, ವಿವಿಧ ಪೂಜೆಗಳಿಗೆ ಒಂದೊಂದು ಬೆಲೆ ನಿಗದಿಪಡಿಸಿರುವಂತಹ ಯಾವುದೇ ವ್ಯವಸ್ಥೆ ಇಸ್ಲಾಂ ಮತ್ತು ಮಸೀದಿಗಳಲ್ಲಿ ಇಲ್ಲ. ಮಸೀದಿಯಲ್ಲಿ ಎಲ್ಲರೂ ಒಂದೇ ಎಂದು ಅವರು ತಿಳಿಸಿದ್ದಾರೆ. ಈ ದೇಶವನ್ನು ಮುಸ್ಲಿಂ ದೊರೆಗಳು ಸುಮಾರು 800 ವರ್ಷಗಳು ಆಳಿದ ಸಂದರ್ಭದಲ್ಲಿಯೇ ಯಾವುದೇ ರೀತಿಯ ಶ್ರೇಷ್ಠತೆಯ ಪ್ರತಿಪಾದನೆಯನ್ನು ಮಾಡಲಿಲ್ಲ ಮತ್ತು ಮುಸ್ಲಿಂ ರಾಷ್ಟ್ರ ಮಾಡುವ ಪ್ರಯತ್ನ ನಡೆಸಲಿಲ್ಲ. ಇಂತಹ ಇತಿಹಾಸವಿರುವ ಮುಸ್ಲಿಮರು ಶ್ರೇಷ್ಠತೆಯ ಪ್ರತಿಪಾದನೆ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಮಜೀದ್ ಅವರು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.

Join Whatsapp
Exit mobile version