ಬೆಂಗಳೂರು: ಮಂಗಳೂರು ಬಾಂಬ್ ಸ್ಫೋಟ ಪ್ರಕರಣದಿಂದ ನಾವೆಲ್ಲರೂ ಎಚ್ಚರಿಕೆಯ ಪಾಠ ಕಲಿಯಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಒಂದು ವೇಳೆ ಸಾರ್ವಜನಿಕರು ನೀವು ಆಧಾರ್ ಕಾರ್ಡ್ ಕಳೆದುಕೊಂಡರೆ ಎಚ್ಚರಿಕೆ ವಹಿಸಬೇಕು ಆಧಾರ್ ಸಂಖ್ಯೆ ನೀಡುವ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ವೆಬ್’ಸೈಟ್’ನಲ್ಲಿ ಲಭ್ಯವಿರುವ ಲಾಕ್ ಮತ್ತು ಅನ್’ಲಾಕ್ ಮಾಡುವ ಆಯ್ಕೆಯನ್ನು ಬಳಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ. ಮನೆಗಳನ್ನು ಬಾಡಿಗೆಗೆ ಕೊಡುವಾಗಲೂ ಬಾಡಿಗೆಗೆ ಬರುವವರ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಮನೆಯ ಅಕ್ಕಪಕ್ಕ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿರಬೇಕು ಎಂದು ಅವರು ಟ್ವೀಟ್ ಮೂಲಕ ರಾಜ್ಯದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ವಿಶಿಷ್ಟ ಗುರುತು ಪ್ರಾಧಿಕಾರದ ಯುಐಡಿಎಐ ವೆಬ್’ಸೈಟ್’ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಿ, ನಿಮ್ಮ ಗುರುತು ದೃಢೀಕರಿಸಿದ ನಂತರ ನಿಮ್ಮ ಆಧಾರ್ ವಿವರಗಳನ್ನು ಲಾಕ್ ಮಾಡಲು ಅವಕಾಶವಿದೆ. ಹೀಗೆ ಆಧಾರ್ ದತ್ತಾಂಶ ಲಾಕ್ ಮಾಡಿದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಯಾರೂ ಯಾವುದೇ ಮಾಹಿತಿಯನ್ನು ದೃಢೀಕರಿಸಲು ಆಗುವುದಿಲ್ಲ.
ಅಂದರೆ ಸಿಮ್ ಪಡೆಯುವುದು, ಬ್ಯಾಂಕ್ ಅಕೌಂಟ್ ತೆರೆಯುವುದು ಸೇರಿದಂತೆ ದುಷ್ಕರ್ಮಿಗಳು ಮೋಸ ಮಾಡುವ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ಒಮ್ಮೆ ಪ್ರೊಫೈಲ್ ಲಾಕ್ ಮಾಡಿದರೆ ಅದು ಅನ್’ಲಾಕ್ ಆಗುವವರೆಗೆ ನೀವೂ ಸಹ ಆಧಾರ್ ವಿವರ ಬಳಸಿ ಯಾವುದೇ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಆಗುವುದಿಲ್ಲ ಎಂಬ ಅಂಶವನ್ನೂ ಸಾರ್ವಜನಿಕರು ಗಮನದಲ್ಲಿ ಇರಿಸಿಕೊಳ್ಳಬೇಕಿದೆ.
ಆಧಾರ್ ಪ್ರೊಫೈಲ್ ಲಾಕ್ ಮಾಡಬೇಕು ಎಂದಿದ್ದರೆ ಮೊದಲು 16 ಅಂಕೆಗಳ ವರ್ಚುವಲ್ ಐಡಿ ನಂಬರ್ ಜನರೇಟ್ ಮಾಡಿಕೊಳ್ಳಿ. ಇದಕ್ಕಾಗಿ ಎಸ್’ಎಂಎಸ್ ಅಥವಾ ಯುಐಡಿಎಐ ವೆಬ್’ಸೈಟ್ ಬಳಸಬಹುದು.
ಲಿಂಕ್ ಮೂಲಕ ನೇರವಾಗಿ ಪ್ರೊಫೈಲ್ ಲಾಕ್ ಸೆಕ್ಷನ್’ಗೆ ಹೋಗಬಹುದು ಅಥವಾ ಯುಐಡಿಎಐ ವೆಬ್’ಸೈಟ್’ನಲ್ಲಿರುವ ‘ಮೈ ಆಧಾರ್ ಟ್ಯಾಬ್ ಕ್ಲಿಕ್ ಮಾಡಿ. ನಂತರ ಆಧಾರ್ ಸರ್ವೀಸ್ ’ ವಿಭಾಗದಲ್ಲಿರುವ ‘ಆಧಾರ್ ಲಾಕ್ ಅನ್ ಲಾಕ್ ’ ವಿಭಾಗಕ್ಕೆ ಹೋಗಿ. ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ಗೆ ಬರುವ ಒಟಿಪಿ ನಮೂದಿಸಿ. ನಂತರ ಸ್ಕ್ರೀನ್ ಮೇಲೆ ಇರುವ ‘ಎನ್ ಎಬಲ್ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಹಂತದ ನಂತರ ನಿಮ್ಮ ಬಯೊಮೆಟ್ರಿಕ್ ವಿವರಗಳು ಲಾಕ್ ಆಗುತ್ತವೆ.
ಒಂದು ವೇಳೆ ನಿಮ್ಮ ಬಯೊಮೆಟ್ರಿಕ್ ವಿವರಗಳನ್ನು ಅನ್’ಲಾಕ್ ಮಾಡಬೇಕು ಎಂಬ ಪರಿಸ್ಥಿತಿ ಬಂದರೆ ಮೊದಲೇ ಪಡೆದುಕೊಂಡಿದ್ದ ವರ್ಚುವಲ್ ಐಡಿ ನಮೂದಿಸಿ. ಒಟಿಪಿ ಎಂಟರ್ ಮಾಡಿ. ನೀವು ಒಟಿಪಿ ಎಂಟರ್ ಮಾಡಿದ ನಂತರ ನಿಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳು ಅನ್’ಲಾಕ್ ಆಗುತ್ತವೆ.