ಕಲಬುರಗಿ: ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ. ಚುನಾವಣೆ ನಡೆಯುವಾಗ ಸುಮ್ಮನಿದ್ದರು. ಚುನಾವಣೆ ಮುಗಿದ ನಂತರ ಮತ್ತೆ ಬೆಲೆ ಹೆಚ್ಚಿಸಿದ್ದಾರೆ. ಇಷ್ಟಾದರೂ ಮತದಾರ ಅವರಿಗೇ ಮತ ಹಾಕುತ್ತಿದ್ದಾನೆ. ಎಲ್ಲರಿಗೂ ಒಂದು ತಾಳ್ಮೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು ಆದರೆ ವೆಚ್ಚ ಡಬಲ್ ಆಗಿದೆ. ಯಾರ ಆದಾಯವೂ ಡಬಲ್ ಆಗಿಲ್ಲ. ಬೆಲೆ ಏರಿಕೆ ವಿರೋಧಿಸಿ ಪಿಕ್ ಪಾಕೆಟ್ ಸರ್ಕಾರದ ವಿರುದ್ಧ ವ್ಯಾಪಕ ಕಾರ್ಯಕ್ರಮ ರೂಪಿಸಿ ಅದನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ನೀವು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳಕ್ಕೆ ಮುಖ್ಯಮಂತ್ರಿ ಅವಕಾಶ ನೀಡಬಾರದು. ಡಬಲ್ ಇಂಜಿನ್ ಸರ್ಕಾರ ಹೆಚ್ಚಿಸುತ್ತಿರುವ ಬೆಲೆ ಏರಿಕೆ ತಡೆಯಲು ರಾಜ್ಯ ಸರ್ಕಾರವೇ ಸಬ್ಸಿಡಿಯನ್ನು ನೀಡಿ ನಿಯಂತ್ರಣ ಮಾಡಬೇಕು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರು ಜಿ23 ಮಾಡಿಕೊಂಡು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ಯಾವ ನಾಯಕರೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷ ಗಾಂಧಿ ನಾಯಕತ್ವದಲ್ಲಿ ಕಷ್ಟಕಾಲದಲ್ಲಿ ನಮ್ಮನ್ನು ಉಳಿಸಿದೆ. ಸೀತಾರಾಮ್ ಕೇಸರಿ ಅವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಶರದ್ ಪವಾರ್, ಮಮತಾ ಬ್ಯಾನರ್ಜಿ ಅವರೆಲ್ಲರೂ ಪಕ್ಷ ತ್ಯಜಿಸಿದಾಗ ನಾವೆಲ್ಲರೂ ಹೋಗಿ ಸೋನಿಯಾ ಗಾಂಧಿ ಅವರಿಗೆ ಅಧ್ಯಕ್ಷೆಯಾಗುವಂತೆ ಮನವಿ ಮಾಡಿದೆವು. ಅವರ ನಾಯಕತ್ವದಲ್ಲಿ ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತರಲಾಯಿತು. ಅವರಿಗೆ ಪ್ರಧಾನ ಮಂತ್ರಿ ಅವಕಾಶ ಸಿಕ್ಕಾಗ ದೇಶದ ಹಿತಕ್ಕಾಗಿ ಆ ಅಧಿಕಾರವನ್ನು ತ್ಯಾಗ ಮಾಡಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ನೀಡಲಾಯಿತು. ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಮಾಡಲು ಶ್ರಮಿಸಿದ್ದಾರೆ. ಎರಡು ಬಾರಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರೆಲ್ಲರೂ ಅಧಿಕಾರ ಅನುಭವಿಸಿದ್ದಾರೆ. ಈಗ ಯಾರು ಕೂಡ ಮಾತಮಾಡುತ್ತಿಲ್ಲ, ಮಾತನಾಡುವ ಆಗತ್ಯವೂ ಇಲ್ಲ. ಕರ್ನಾಟಕ ಸೇರಿದಂತೆ ರಾಷ್ಟ್ರಾದ್ಯಂತ ‘ಗಾಂಧಿ ಕುಟುಂಬವಿಲ್ಲದೆ, ಕಾಂಗ್ರೆಸ್ ಪಕ್ಷ ಇಲ್ಲ’ ಎಂಬ ಒಂದೇ ಘೋಷವಾಕ್ಯವಿದೆ’ ಎಂದರು.
ರಾಜ್ಯದಲ್ಲಿ ಬಿಡಿಎ ದಲ್ಲಾಳಿಗಳ ಮೇಲೆ ದಾಳಿ ಮಾಡುವಷ್ಟು ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, ‘ಈ ಸರ್ಕಾರ ಭ್ರಷ್ಟಾಚಾರವನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ. ನಮ್ಮ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗೋಷ್ಠಿ ನಡೆಸಿ ಬಡವರಿಗೆ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತರ ವಿವಿಧ ನಿಗಮಗಳಲ್ಲಿ ಕೊಳವೆ ಬಾವಿ ಕೊರೆದುಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಡಿಗೆ ಸುಮಾರು 300 ಲೆಕ್ಕದಲ್ಲಿ 90 ಸಾವಿರ ರೂ. ಮೊತ್ತದ ಕೊಳವೆ ಬಾವಿ ನಿರ್ಮಾಣ ಕಾಮಗಾರಿಯ ಮೊಟ್ಟವನ್ನು ಸುಮಾರು 1.80 ಲಕ್ಷಕ್ಕೆ ಅಂದರೆ ಡಬಲ್ ಮಾಡಿ ಗುತ್ತಿಗೆದಾರರಿಗೆ ನೀಡಲಾಗಿದೆ. ಆಮೂಲಕ ಈ ಸರ್ಕಾರ ಭ್ರಷ್ಟಾಚಾರದಲ್ಲಿ 40% ನಿಂದ 100%ಗೆ ಬಡ್ತಿ ಪಡೆದಿದೆ. ರೈತನ ಕೊಳವೆ ಬಾವಿಯಲ್ಲಿ 100% ಭ್ರಷ್ಟಾಚಾರ ಮಾಡುತ್ತಿದ್ದಾರೆ. ಗುತ್ತಿಗೆದಾರರಿಂದ 40% ಲಂಚ ಪಡೆಯುತ್ತಿದ್ದಾರೆ. ಮೊನ್ನೆ ಮಾಧ್ಯಮದಲ್ಲಿ ಆರೋಗ್ಯ ಇಲಾಖೆ ಅಕ್ರಮದ ಬಗ್ಗೆ ವರದಿ ಬಂದಿದೆ ಎಂದು ಡಿಕೆಶಿ ಹೇಳಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಮೋದಿ ಅವರೇ ಅತ್ಯುನ್ನತ ಪ್ರಶಸ್ತಿಯನ್ನು ನೀಡಬೇಕಿದೆ. ಎಲ್ಲರೂ ಸೇರಿ ಭ್ರಷ್ಟಾಚಾರ ಮಾಡುತ್ತಿದ್ದಾರೆ’ ಎಂದರು.
ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವುದರಿಂದ ಕಾಂಗ್ರೆಸ್ ಗೆ ಹೊಟ್ಟೆ ಉರಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ‘ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವುದರಿಂದ ನಮಗೆ ಹೊಟ್ಟೆ ಉರಿಯುತ್ತದೆ ಎಂದು ಹೇಳಿದವರು ಯಾರು? ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಇಡೀ ದೇಶಕ್ಕೆ ಚಿಕ್ಕಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ವರ್ಷಾನುಗಟ್ಟಲೆ ರಾಮಾಯಣ, ಮಹಾಭಾರತವನ್ನು ತೋರಿಸಿ, ದೇಶದ ಸಂಸ್ಕೃತಿ, ಇತಿಹಾಸ, ಗ್ರಂಥ, ಪರಂಪರೆಯನ್ನು ಪರಿಚಯಿಸಿದ್ದರು. ಕೆಂಗಲ್ ಹನುಮಂತಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2 ರೂ.ಗೆ ಭಗವದ್ಗೀತೆ ಪುಸ್ತಕವನ್ನು ಮನೆ ಮನೆಗೂ ಹಂಚಿದ್ದರು. ಇದೆಲ್ಲವನ್ನು ಮಾಡಿದ್ದು ನಾವು. ನಾವ್ಯಾಕೆ ಇದನ್ನು ವಿರೋಧಿಸೋಣ? ನನಗೆ ಭಗವದ್ಗೀತೆ ಶ್ಲೋಕ ಗೊತ್ತಿದೆ. ಅದನ್ನು ಬಿಜೆಪಿಯವರು ಬಂದು ಹೇಳಿಕೊಟ್ಟಿದ್ದರಾ? ನಾನು ಶಾಲೆಯಲ್ಲಿರುವಾಗಲೇ ಕಲಿತಿದ್ದೆ. ಈ ವಿಚಾರದ ಬಗ್ಗೆ ಬಿಜೆಪಿಯವರು ಸದನದಲ್ಲಿ ಚರ್ಚೆಗೆ ಬರಲಿ. ಅವರು ಶ್ಲೋಕ ಹೇಳಲಿ. ಹಿಂದುತ್ವ ಇವರ ಮನೆ ಆಸ್ತಿನಾ? ದೇಶದ ಜನರಿಗೆ ಈ ಗ್ರಂಥಗಳ ಪ್ರಚಾರ ಮೊದಲು ಆರಂಭಿಸಿದ್ದು ಕಾಂಗ್ರೆಸ್, ಆಮೇಲೆ ಇವರು ರಾಮ ಮಂದಿರ ಕಟ್ಟುತ್ತೇವೆ ಎಂದು ಮುಂದೆ ಬಂದರು.
ಧರ್ಮದಲ್ಲಿರುವ ಒಳ್ಳೆಯ ವಿಚಾರವನ್ನು ಮಕ್ಕಳಿಗೆ ಹೇಳಿಕೊಡಿ. ಕ್ರೈಸ್ತ, ಬೌದ್ಧ, ಜೈನ ಧರ್ಮಗಳಲ್ಲೂ ಉತ್ತಮ ವಿಚಾರಗಳಿವೆ. ಅವುಗಳನ್ನು ಹೇಳಿಕೊಡಿ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ಇದಕ್ಕೆ ನಾವು ಒಪ್ಪಿಗೆ ಕೊಡುವುದೇನು? ಇದನ್ನು ಆರಂಭಿಸಿದ್ದೆ ನಾವು. ನಾವು ಮಾಡಿರುವುದನ್ನು ಅವರು ಕಾಪಿ ಮಾಡುತ್ತಿದ್ದಾರೆ.
ಈಗಾಗಲೇ ಶ್ರೀಕೃಷ್ಣ ಸೇರಿದಂತೆ ಹಿಂದೂ ಧರ್ಮದ ಅಂಶಗಳು ಇಲ್ಲವೇ? ಭಗವದ್ಗೀತೆ ಪೂರ್ಣ ಪಟ್ಟಿ ಇಲ್ಲದಿದ್ದರೂ ಅಂಶಗಳು ಇಲ್ಲವೇ?’ ಎಂದರು.
ಮೇಕೆದಾಟು ವಿಚಾರವಾಗಿ ತಮಿಳುನಾಡು ವಿಧಾನ ಮಂಡಲ ನಿರ್ಣಯ ಕೈಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ತಮಿಳುನಾಡು ರಾಜಕಾರಣ ಮಾಡುತ್ತಿದೆ. ಅವರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಆ ರಾಜ್ಯದ ನಿರ್ಧಾರದ ಬಗ್ಗೆ ಮಾತನಾಡುವುದಿಲ್ಲ. ಅದು ಅವರ ರಾಜಕೀಯ ಇಚ್ಛಾಶಕ್ತಿ. ಈ ಆಣೆಕಟ್ಟು ನಿರ್ಮಾಣ ವಿಚಾರವಾಗಿ ಯಾವುದೇ ಅಡ್ಡಿ ಇಲ್ಲ. ಈ ಯೋಜನೆ ಎರಡೂ ರಾಜ್ಯಗಳ ಹಿತ ಕಾಯಲಿದೆ. ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚಿನ ಲಾಭ ಇದ್ದು, ಬಿಜೆಪಿ ಸರ್ಕಾರ ಈ ಯೋಜನೆ ಮಾಡುವುದಾಗಿ ಮಾತು ಕೊಟ್ಟಿದ್ದು, ಅದಕ್ಕೆ ಬದ್ಧವಾಗಿರಲಿ. ತಮಿಳುನಾಡು ರೀತಿ ರಾಜ್ಯದಲ್ಲಿರುವ ಬಿಜೆಪಿ ಡಬಲ್ ಇಂಜಿನ ಸರ್ಕಾರ ಇಚ್ಚಾಶಕ್ತಿ ಪ್ರದರ್ಶಿಸಬೇಕು. ಡಬಲ್ ಇಂಜಿನ್ ಸರ್ಕಾರಕ್ಕೆ ಬದ್ಧತೆ ಇರಬೇಕು. ಮೊನ್ನೆ ಸರ್ವಪಕ್ಷ ಸಭೆ ಆದಮೇಲೆ ಮುಖ್ಯಮಂತ್ರಿ ಏನು ಹೇಳಿದರು? ಇದು ನಮ್ಮ ಹಕ್ಕು, ಯಾವುದೇ ಅಡ್ಡಿಯಿಲ್ಲ. ಈ ವಿಚಾರವಾಗಿ ಕೇಂದ್ರ ಸಚಿವರು, ಪ್ರಧಾನಿಗಳ ಜತೆ ಮಾತನಾಡಿ, ಅನುಮತಿ ಪಡೆದು ಯೋಜನೆ ಆರಂಭಿಸುತ್ತೇವೆ. ಅದಕ್ಕಾಗಿ ಹಣ ಇಟ್ಟಿದ್ದೇವೆ, ಕೇಂದ್ರ ಒಪ್ಪಿಗೆ ಕೊಡಲಿಲ್ಲ ಎಂದರೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದು ನಿಜ ಅಲ್ಲವೇ? ಈ ಯೋಜನೆಗೆ ರಾಜಕೀಯ ಇಚ್ಚಾಶಕ್ತಿ ಮುಖ್ಯ. ಡಬಲ್ ಇಂಜಿನ್ ಸರ್ಕಾರಕ್ಕೆ ಕರ್ನಾಟಕ ಬೇಕೋ, ತಮಿಳುನಾಡು ಬೇಕೋ, 25 ಜನ ಸಂಸದರು ಬೇಕೋ, ತಮಿಳುನಾಡಿನ ಬಿಜೆಪಿ ವಿಚಾರ ಬೇಕೋ ಅವರೇ ತೀರ್ಮಾನಿಸಲಿ. ಗೋವಾ ಬೇಕೋ, ಕರ್ನಾಟಕ ಬೇಕೋ ನಿರ್ಧಾರ ಮಾಡಲಿ’ ಎಂದು ಸವಾಲು ಹಾಕಿದರು.
ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಡಿಜಿಟಲ್ ಸದಸ್ಯತ್ವ ಅಭಿಯಾನ ಆರಂಭಿಸಿದೆ. ನೋಂದಣಿದಾರರನ್ನು ನೇಮಕ ಮಾಡಿ ಮತದಾರರ ಗುರುತಿನ ಚೀಟಿ, ದೂರವಾಣಿ ಸಂಖ್ಯೆ ಪಡೆದು 5 ರೂ. ಶುಲ್ಕದೊಂದಿಗೆ ಸದಸ್ಯತ್ವ ನೀಡಲಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ 25 ಲಕ್ಷ ಸದಸ್ಯತ್ವ ಮಾಡಲಾಗಿದ್ದು, 31ರ ವರೆಗೆ ಈ ಅಭಿಯಾನ ನಡೆಯಲಿದೆ. ಚುನಾವಣಾ ಆಯೋಗದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಪ್ರಾವಿಷನ್ ಸದಸ್ಯತ್ವ ಪಡೆದಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ.
ವಿಧಾನ ಮಂಡಲ ಕಲಾಪ ನಡೆಯುತ್ತಿದ್ದರೂ ನಮ್ಮ ನಾಯಕರೆಲ್ಲರೂ ಇಂದು ಇಲ್ಲಿ ಸದಸ್ಯತ್ವ ನೋಂದಣಿ ಪರಿಶೀಲನೆಗೆ ಬಂದಿದ್ದೇವೆ. ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದ್ದು, ಅದರ ಭಾಗವಾಗಿ ಪಿಆರ್ ಓಗಳು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಆಮೂಲಕ ನೀವು ಅಧಿಕಾರಕ್ಕೆ ಬರಬೇಕು ಎಂದು ಇಚ್ಚಿಸುವವರು ಬ್ಲಾಕ್ ಮಟ್ಟದಲ್ಲಿ ಜವಾಬ್ದಾರಿಯಿಂದ ಸದಸ್ಯತ್ವ ನೋಂದಣಿ ಅಭಿಯಾನ ಮಾಡಬೇಕು.
ಜುಲೈ 21ರಿಂದ ಆಗಸ್ಟ್ 20ರವರೆಗೂ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸದಸ್ಯರನ್ನು ಮಾಡುವಾಗ ನಾವು ಮನೆ, ಮನೆಗೂ ಹೋಗುತ್ತೇವೆ. ಯಾರು ನಮ್ಮ ಪರ ನಿಲ್ಲುತ್ತಾರೆ, ಯಾರು ನಮ್ಮ ಪರ ನಿಲ್ಲುವುದಿಲ್ಲ ಎಂದು ಗೊತ್ತಾಗುತ್ತದೆ. ನಮ್ಮ ಜತೆ ಯಾರು ಬರುವುದಿಲ್ಲವೋ ಅವರ ಮನವೊಲಿಕೆ ಪ್ರಯತ್ನ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.