ಜೈಪುರ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಅದಾನಿ ಗ್ರೂಪ್ ಸಂಸ್ಥೆಯು ಇದೀಗ ಜೈಪುರ ವಿಮಾನ ನಿಲ್ದಾಣವನ್ನು ತನ್ನ ತೆಕ್ಕೆಗೆ ವಹಿಸಿಕೊಂಡಿದೆ. ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಅದಾನಿ ಗ್ರೂಪ್ ಗೆ ವರ್ಗಾಯಿಸಿತು.
ಸುಮಾರು ಐವತ್ತು ವರ್ಷಗಳ ನಿರ್ವಹಣೆಯ ಜವಾಬ್ದಾರಿಯನ್ನು ಭಾರತ ಸರ್ಕಾರವು ಗೌತಮ್ ಅದಾನಿಗೆ ಗ್ರೂಪ್ ಗೆ ನೀಡಿದೆ. ಎಎಐ ನಿರ್ದೇಶಕ ಜೆ ಎಸ್ ಬಿಂದ್ರಾ ವಿಮಾನ ನಿಲ್ದಾಣದ ಕೀಲಿ ಕೈಯನ್ನು ಸೋಮವಾರ ಅದಾನಿ ಜೈಪುರ ಇಂಟರ್ನ್ಯಾಶನಲ್ ಲಿಮಿಟೆಡ್ನ ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ವಿಷ್ಣು ಝಾ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ವಿಷ್ಣು ಝಾ ಅದಾನಿ ಸಂಸ್ದಯು ನಿಲ್ದಾಣದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಆಧಾರದಲ್ಲಿ ನಿಲ್ದಾಣದ ಕಾರ್ಯ ಚಟುವಟಿಕೆ, ನಿರ್ವಹಣೆ, ಮತ್ತು ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಹೇಳಿದರು.
ಅದಾನಿ ಸಂಸ್ಥೆಯು ಕಳೆದ ಎರಡು ತಿಂಗಳಿನಿಂದ ಜೈಪುರ ನಿಲ್ದಾಣದ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಿದ್ದು, ಆರು ತಿಂಗಳ ಹಿಂದೆಯೇ ಅದಾನಿ ಪಾಲಾಗಬೇಕಿದ್ದ ನಿಲ್ದಾಣವು ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು.ಇದೀಗ ಸರಕಾರ ಮೂರು ತಿಂಗಳೊಳಗೆ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಳ್ಳ ಬೇಕೆಂಬ ಗಡುವು ನೀಡಿದ್ದರಿಂದ ಅದಾನಿ ಸಂಸ್ಥೆ ತನ್ನ ತೆಕ್ಕೆಗೆ ವಹಿಸಿಕೊಂಡಿತು.