Home ಕ್ರೀಡೆ ಜಂಪಾ ಸ್ಪಿನ್ ದಾಳಿಗೆ ಬಾಂಗ್ಲಾ ಕಂಗಾಲು: ಸೆಮೀಸ್’ನತ್ತ ಆಸೀಸ್ ಚಿತ್ತ

ಜಂಪಾ ಸ್ಪಿನ್ ದಾಳಿಗೆ ಬಾಂಗ್ಲಾ ಕಂಗಾಲು: ಸೆಮೀಸ್’ನತ್ತ ಆಸೀಸ್ ಚಿತ್ತ

ದುಬೈ: ಆ್ಯಡಂ ಜಂಪಾ ಸ್ಪಿನ್ ದಾಳಿಗೆ ಕಂಗಾಲಾದ ಬಾಂಗ್ಲಾದೇಶ ತಂಡ, ಐಸಿಸಿ T-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ  ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್  ಸ್ಟೇಡಿಯಂನಲ್ಲಿ ನಡೆದ ಗುರುವಾರದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ಬಾಂಗ್ಲಾದೇಶ ಕೇವಲ 73 ರನ್‌ಗಳಿಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನತ್ತಿದ ಫಿಂಚ್ ಪಡೆ 6.2 ಓವರ್‌ಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ಮೂಲಕ ಸೆಮಿಫೈನಲ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ.

ಟಾಸ್ ಸೋತು ಬ್ಯಾಟಿಂಗ್’ಗೆ ಇಳಿಸಲ್ಪಟ್ಟ ಮುಹಮ್ಮದುಲ್ಲಾ ಪಡೆಗೆ ಆ್ಯಡಂ ಜಂಪಾ ಕಂಟಕವಾದರು. ಖಾತೆ ತೆರೆಯುವ ಮುನ್ನವೇ  ನಂಬಿಕಸ್ಥ ಬ್ಯಾಟ್ಸ್’ಮನ್ ಲಿಟನ್ ದಾಸ್ ಮರಳಿದರೆ, 6 ರನ್ ಗಳಿಸುವಷ್ಟರಲ್ಲಿ ಸೌಮ್ಯ ಸರ್ಕಾರ್ ಕೂಡ ವಾಪಸಾದರು. ಇಬ್ಬರೂ ಇನ್’ಸೈಡ್ ಎಡ್ಜ್ ಆಗಿ ಔಟ್ ಆಗಿದ್ದು ಬಾಂಗ್ಲಾ ಪಾಲಿಗೆ ಮುಳುವಾಯಿತು.

33 ರನ್’ಗಳಿಸುವಷ್ಟರಲ್ಲೇ ಬಾಂಗ್ಲಾದ ಐವರು ಅಗ್ರ ಬ್ಯಾಟರ್’ಗಳು ಪೆವಿಲಿಯನ್ ಸೇರಿದ್ದರು. ಬಳಿಕ ನಾಯಕ ಮುಹಮ್ಮದುಲ್ಲಾ ಜೊತೆಗೂಡಿದ ಶಮೀಮ್ ಹೊಸೇನ್  ತಂಡಕ್ಕೆ ಒಂದಿಷ್ಟು ನೆರವಾದರು. ಮುಹಮ್ಮದುಲ್ಲಾ 16 ರನ್’ಗಳಿಸಿದರೆ ಶಮೀಮ್ ಹುಸೇನ್  19 ರನ್’ಗಳಿಸಿ ಔಟಾದರು. ಕೊಂಚ ಚೇತರಿಕೆಯ ಭರವಸೆ ಮೂಡಿದ್ದ ವೇಳೆ ದಾಳಿಗಿಳಿದ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಬಾಂಗ್ಲಾದ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. 4 ಓವರ್’ಗಳ ದಾಳಿಯಲ್ಲಿ 19 ರನ್’ನೀಡಿ 5 ವಿಕೆಟ್ ಕಿತ್ತ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜಂಪಾ ಹ್ಯಾಟ್ರಿಕ್  ಸಾಧನೆಗೆ ಕ್ಯಾಚ್ ಕೈಚೆಲ್ಲುವ ಮೂಲಕ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಅಡ್ಡಿಯಾದರು. ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್‌ಗೆ ತಲಾ 2  ವಿಕೆಟ್ ಪಡೆದರು.

74 ರನ್‌ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಕೇವಲ 2 ವಿಕೆಟ್ ನಷ್ಟದಲ್ಲಿ 82 ಎಸೆತಗಳನ್ನು ಬಾಕಿ ಇರಿಸಿ ಗೆದ್ದು ಬೀಗಿತು. ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ನಾಯಕ ಆ್ಯರನ್ ಫಿಂಚ್ ಐದು ಓವರ್‌ಗಳಲ್ಲಿ 58 ರನ್ ಕಲೆ ಹಾಕಿದ್ದರು. 18 ರನ್’ಗಳಿಸಿದ್ದ ವಾರ್ನರ್, ಷರಫುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು. ಮಿಷೆಲ್ ಮಾರ್ಷ್ ಕೇವಲ 5 ಎಸೆತಗಳಲ್ಲಿ 16 ರನ್ ಗಳಿಸಿ ಮಿಂಚಿದರು.  ಕ್ಯಾಪ್ಟನ್ ಫಿಂಚ್ 20 ಎಸೆತಗಳಲ್ಲಿ 40 ರನ್ ಗಳಿಸಿ ನಿರ್ಗಮಿಸಿದರು.

ಇದರೊಂದಿಗೆ ಸೂಪರ್‌ 12 ಹಂತದ ಗ್ರೂಪ್-1ರ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿಂದಿಕ್ಕಿ ಆಸ್ಟ್ರೇಲಿಯಾ 2ನೇ ಸ್ಥಾನಕ್ಕೇರಿದ್ದು, ನೆಟ್‌ ರನ್‌ರೇಟ್’ನಲ್ಲೂ ಏರಿಕೆ ಕಂಡಿದೆ. ಆಸ್ಟ್ರೇಲಿಯಾ ತಂಡವು  ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಇದೇ ಗುಂಪಿನಲ್ಲಿರುವ ದಕ್ಷಿಣ ಆಫ್ರಿಕಾ, ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.. ಈ ಎರಡು ಪಂದ್ಯಗಳ ಫಲಿತಾಂಶದ ಬಳಿಕವಷ್ಟೇ ಗ್ರೂಪ್-1ರ ಸೆಮಿಫೈನಲಿಸ್ಟ್ ಯಾರಾಗಲಿದ್ದಾರೆ ಎಂಬುದ ಸ್ಪಷ್ಟವಾಗಲಿದೆ. ಗ್ರೂಪ್-1ರಲ್ಲಿ ಸತತ 4 ಪಂದ್ಯಗಳನ್ನು ಜಯಿಸಿರುವ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್ ಟಿಕೆಟ್ ಖಾತ್ರಿಪಡಿಸಿಕೊಂಡಿದೆ.

Join Whatsapp
Exit mobile version