Home ಟಾಪ್ ಸುದ್ದಿಗಳು ನಟಿ ಸಾಯಿ ಪಲ್ಲವಿಯ ಬೆಂಬಲಕ್ಕೆ ನಿಂತ ಖ್ಯಾತ ನಟ ಕಿಶೋರ್ ಕುಮಾರ್

ನಟಿ ಸಾಯಿ ಪಲ್ಲವಿಯ ಬೆಂಬಲಕ್ಕೆ ನಿಂತ ಖ್ಯಾತ ನಟ ಕಿಶೋರ್ ಕುಮಾರ್

►►ಬಾಯಿ ಮುಚ್ಚಿಸುವ ಕೆಲಸವನ್ನು ಮಾಧ್ಯಮಗಳು ಯಾವಾಗಿಂದ ಗುತ್ತಿಗೆ ಪಡೆದವು?

ಬೆಂಗಳೂರು: ಖ್ಯಾತ ನಟಿ ಸಾಯಿಪಲ್ಲವಿ ಹೇಳಿಕೆ ವಿರುದ್ದದ ಮಾಧ್ಯಮಗಳ ದಬ್ಬಾಳಿಕೆಯನ್ನು ಕನ್ನಡದ ನಟ ಕಿಶೋರ್ ಕುಮಾರ್ ಖಂಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಿಶೋರ್, “ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ, ಮಾಧ್ಯಮಗಳು ಯಾವಾಗಿಂದ ಈ ಕೆಲಸಕ್ಕೂ ಗುತ್ತಿಗೆ ಪಡೆದವು?” ಎಂದು ಮಾಧ್ಯಮಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

“ಸಿನಿಮಾದವರಿಗೆ ಜನಪರ ಕಾಳಜಿ ಇರುವುದು ತಪ್ಪೇ? ಕಾರಣ ಏನೇ ಆದರೂ ಕೊಲೆ ಮಾಡುವ ಮನಸ್ಥಿತಿ ಒಂದೇ ಹಾಗೂ ಅದು ತಪ್ಪು ಎಂದರೆ ತಪ್ಪೇ? ನಮ್ಮಲ್ಲಿನ ಅಲ್ಪಸಂಖ್ಯಾತರನ್ನು ನಾವು ಹೇಗೆ ಸಮಾನರಾಗಿ ಬದುಕಲು ಬಿಡುತ್ತೇವೆನ್ನುವುದು ನಮ್ಮ ಸಮಾಜದ ಸ್ವಾಸ್ಥ್ಯದ, ಸಭ್ಯತೆಯ ಅಳತೆಗೋಲು ಎನ್ನುವುದು ತಪ್ಪೇ? ಜೀವಕ್ಕೆ ಜಾತಿ ಧರ್ಮಗಳ ಹಂಗಿಲ್ಲವೆಂದರೆ ತಪ್ಪೇ? ಒಬ್ಬರ ಆಹಾರ ಕ್ರಮದ ಮೇಲೆ ನಿಷೇಧ ಹೇರಿ ಆಹಾರವನ್ನೂ ದ್ವೇಷದ ಸಾಧನವಾಗಿ ಬಳಸಬಾರದೆಂದರೆ ತಪ್ಪೇ? ಮಾನವೀಯತೆಯ ನಿಲುವಿನ ಸಾಯಿಪಲ್ಲವಿಯಿಂದ ಈ ಮಾಧ್ಯಮದವರು ಕಲಿಯಿವುದು ಸಾಕಷ್ಟಿದೆ. ಸಾಮಾಜಿಕ ಬದ್ಧತೆಯನ್ನು ಧರ್ಮಾಂಧತೆಯ ಕನ್ನಡಿಯಲ್ಲಿ ನೋಡುವ ಮಾಧ್ಯಮ ಗೋಕಾಕ್ ಚಳುವಳಿಯ ಕಾಲದಲ್ಲಿದ್ದಿದ್ದರೆ ರಾಜಕುಮಾರ್ ರವರ ಬಾಯನ್ನೂ ಮುಚ್ಚಿಸುತ್ತಿತ್ತೇನೊ.” ಎಂದು ಕಿಶೋರ್ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರು ಸಾಯಿ ಪಲ್ಲವಿ ವಿರುದ್ಧ ಬೇಜವಾಬ್ದಾರಿಯುತವಾಗಿ ಆಡಿದ ಮಾತಿನಿಂದ ಚಿತ್ರರಂಗ ಗರಂ ಆಗಿತ್ತು. ಈ ಹಿನ್ನೆಲೆಯಲ್ಲಿ ಕಿಶೋರ್ ಕುಮಾರ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿ, ಸಾಯಿ ಪಲ್ಲವಿಗೆ ಬೆಂಬಲ ಸೂಚಿಸಿದ್ದಾರೆ.

Join Whatsapp
Exit mobile version