Home ಟಾಪ್ ಸುದ್ದಿಗಳು ನಟ ದಿಲೀಪ್ ವಿಚಾರಣೆ: ಗಡುವು ವಿಸ್ತರಣೆ ಕುರಿತು ರಾಜ್ಯ ಸರ್ಕಾರ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್...

ನಟ ದಿಲೀಪ್ ವಿಚಾರಣೆ: ಗಡುವು ವಿಸ್ತರಣೆ ಕುರಿತು ರಾಜ್ಯ ಸರ್ಕಾರ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ವಿರುದ್ಧ ನಡೆಸುತ್ತಿರುವ ವಿಚಾರಣೆಯ ಗಡುವು ವಿಸ್ತರಿಸುವಂತೆ ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿ ಕುರಿತು ಯಾವುದೇ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳುವುದು ವಿಚಾರಣಾ ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು.

ನಟನ ವಿರುದ್ಧದ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಫೆಬ್ರವರಿ 16, 2022ರವರೆಗೆ ಗಡುವು ನಿಗದಿಪಡಿಸಿತ್ತು. ಇದನ್ನು 6 ತಿಂಗಳು ವಿಸ್ತರಿಸುವಂತೆ ಕೋರಿ ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋಗಿತ್ತು. ರಾಜ್ಯ ಸರ್ಕಾರದ ಮನವಿ ವಿರೋಧಿಸಿ ದಿಲೀಪ್ ಕೂಡ ಅರ್ಜಿ ಸಲ್ಲಿಸಿದ್ದರು. ಸರ್ಕಾರ ತಮ್ಮ ಕಕ್ಷೀದಾರನ ವಿರುದ್ಧ ಮಾಧ್ಯಮ ವಿಚಾರಣೆ ನಡೆಸುತ್ತಿದೆ ಎಂದು ದಿಲೀಪ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದಿಸಿದರು. ಆದರೆ ಮನವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಲು ನ್ಯಾಯಾಲಯ ನಿರಾಕರಿಸಿತು.

ಇದೇ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಕೇರಳ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಮಲಯಾಳಂ ಸಿನಿಮಾ ನಟ ದಿಲೀಪ್ಗೆ ಕೇರಳ ಹೈಕೋರ್ಟ್ ಜನವರಿ 27ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

(ಕೃಪೆ: ಬಾರ್ & ಬೆಂಚ್)

Join Whatsapp
Exit mobile version