Home ಜಾಲತಾಣದಿಂದ ಕರ್ಣನ್, ಜೈ ಭೀಮ್ ಸಿನಿಮಾ ಜಾತಿ ವಿರೋಧಿ ಪ್ರಾಪಗಾಂಡ ಎಂದು ಪರಿಗಣಿಸಬಹುದಲ್ಲವೇ? : ನಟ ಚೇತನ್‌...

ಕರ್ಣನ್, ಜೈ ಭೀಮ್ ಸಿನಿಮಾ ಜಾತಿ ವಿರೋಧಿ ಪ್ರಾಪಗಾಂಡ ಎಂದು ಪರಿಗಣಿಸಬಹುದಲ್ಲವೇ? : ನಟ ಚೇತನ್‌ ಪ್ರಶ್ನೆ

ಬೆಂಗಳೂರು: ʻದಿ ಕೇರಳ ಸ್ಟೋರಿʼ ಅದೊಂದು ಪ್ರಾಪಗಾಂಡ ಸಿನಿಮಾ ಎಂದು ಟೀಕಿಸಿದ್ದ ನಟ ಕಮಲ್‌ ಹಾಸನ್‌ ಹೇಳಿಕೆಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್‌ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿರುವ ನಟ, ‘ದಿ ಕೇರಳ ಸ್ಟೋರಿ’ಗೆ ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್, ‘ನಾನು ಪ್ರಾಪಗಾಂಡ ಚಿತ್ರಗಳ ವಿರುದ್ಧ ಇದ್ದೇನೆ’ ಎಂದಿದ್ದಾರೆ. ನಾವು ರಾಜಕೀಯವಾಗಿ/ಸೈದ್ಧಾಂತಿಕವಾಗಿ ವಿರೋಧಿಸುವುದನ್ನು ಪ್ರಾಪಗಾಂಡ ಎಂದು ಕರೆಯುತ್ತೇವೆ. ‘ಕರ್ಣನ್’ ಮತ್ತು ‘ಜೈ ಭೀಮ್’ ಅನ್ನು ಜಾತಿ ವಿರೋಧಿ ಅಥವಾ ಪೊಲೀಸ್ ವಿರೋಧಿ ಪ್ರಾಪಗಾಂಡ ಎಂದು ಪರಿಗಣಿಸಬಹುದಲ್ಲವೇ? ಬಲವಾದ ಪ್ರಜಾಪ್ರಭುತ್ವಕ್ಕಾಗಿ, ವಿಭಿನ್ನ ಸಿದ್ಧಾಂತಗಳು ಕೂಡ ಅಸ್ತಿತ್ವದಲ್ಲಿ ಇರಬೇಕು/ ಇರುತ್ತವೆ ಎಂದು ಹೇಳಿದ್ದಾರೆ.

ಅಬುಧಾಬಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ಕಮಲ್‌ ಹಾಸನ್‌, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ದಿ ಕೇರಳ ಸ್ಟೋರಿಯ ಟ್ರೈಲರ್ ರಿಲೀಸ್ ಆದ ಸಂದರ್ಭದಲ್ಲಿ ಒಟ್ಟು 32 ಸಾವಿರ ಯುವತಿಯರ ಮತಾಂತರ ಮಾಡಲಾಗಿದೆ ಎಂದು ಸಿನಿಮಾ ತಂಡ ಹೇಳಿತ್ತು. ಸಿನಿಮಾ ಕುರಿತು ವ್ಯಾಪಕ ಟೀಕೆ ಬಂದ ಬೆನ್ನಲ್ಲೇ ಸಂಖ್ಯೆಯ ವಿಚಾರವನ್ನು ಸಿನಿಮಾದಿಂದಲೇ ಕೈ ಬಿಡಲಾಗಿತ್ತು.

Join Whatsapp
Exit mobile version