ಬೆಂಗಳೂರು: ಮುಸ್ಲಿಮ್ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪನೆಯ ನಿರ್ಧಾರವು ಮುಸ್ಲಿಮ್ ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಯಿಂದ ಬೇರ್ಪಡಿಸುವ ಕ್ರಮ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಹಿಜಾಬ್ ನೆಪ ಮಾಡಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿಯುವ ಷಡ್ಯಂತ್ರ ನಡೆಸಿದ ನಂತರ ಈಗ ಚುನಾವಣೆಯ ಹೊಸ್ತಿಲಲ್ಲಿ ಓಲೈಕೆಯ ಭಾಗವಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ 10 ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಹಿಂಬಾಗಿಲಿನಿಂದ ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಲ್ಫ್ ಬೋರ್ಡ್ ಹಣವನ್ನು ಬಳಸಿಕೊಂಡು ಈ ಕಾಲೇಜುಗಳನ್ನು ಸ್ಥಾಪಿಸುವ ಕಾರ್ಯಕ್ಕೆ ಮುಂದಾಗಿದೆ. ಇದು ಅನಾವಶ್ಯಕ ಮತ್ತು ಮುಸ್ಲಿಂ ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಡಿಸುವ ಕ್ರಮವಾಗಿರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ವಿಚಾರವಾಗಿ ಅಷ್ಟೊಂದು ಕಾಳಜಿ ಇದ್ದಿದ್ದದೆ ಹಿಜಾಬ್ ವಿಚಾರದಲ್ಲಿ ಕ್ರೂರಿಯಂತೆ ನಡೆದುಕೊಳ್ಳುತ್ತಿರಲಿಲ್ಲ. ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಸ್ಲಿಮರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಕು ಎನ್ನುವುದು ಫ್ಯಾಶಿಸ್ಟ್ ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ. ಆದರೆ ಈಗ ಚುನಾವಣೆಯ ಸಂದರ್ಭದಲ್ಲಿ ಒಂದಷ್ಟು ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ಮುಸ್ಲಿಂ ಹೆಣ್ಣು ಮಕ್ಕಳಿಗೆ 10 ಪ್ರತ್ಯೇಕ ಕಾಲೇಜುಗಳನ್ನು ವಲ್ಫ್ ಬೋರ್ಡ್ ಮೂಲಕ ಸ್ಥಾಪಿಸಲು ಮುಂದಾಗಿದೆ. ಮುಸ್ಲಿಂ ಸಮುದಾಯಕ್ಕೆ ಬಳಕೆಯಾಗಬೇಕಾದಂತಹ ವಲ್ಫ್ ಬೋರ್ಡ್ ನ ಅನುದಾನದಲ್ಲಿ ಪ್ರತಿ ಕಾಲೇಜಿಗೆ ಎರಡೂವರೆ ಕೋಟಿಯಂತೆ ವಕ್ಫ್ ಬೋರ್ಡ್ ನ ಹಣವನ್ನು ಬಳಸಲಾಗುವುದು ಎಂದು ತಿಳಿದು ಬಂದಿದೆ. ಇದು ಬಿಜೆಪಿ ಸರ್ಕಾರದ ಕೋಲೂ ಮುರಿಯಬಾರದು, ಹಾವೂ ಸಾಯಬೇಕು ಎನ್ನುವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ.
ಒಂದೆಡೆ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನವನ್ನು ರದ್ದು ಮಾಡುತ್ತಿದೆ. ಇನ್ನೊಂದೆಡೆ ಅದೇ ಬಿಜೆಪಿಯ ರಾಜ್ಯ ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜುಗಳನ್ನು ತೆರೆಯುವ ನಾಟಕವಾಡುತ್ತಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದಿರುವ ಮಜೀದ್ ಅವರು, ವಲ್ಫ್ ಬೋರ್ಡ್ ಹಣವನ್ನು ಮೀಸಲಿಡಲಾಗಿರುವ ಉದ್ದೇಶಗಳಿಗೆ ಮಾತ್ರ ಬಳಸಬೇಕು. ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಮಾಡಲೇಬೇಕು ಎನ್ನುವ ಹಠ ಹೊಂದಿದ್ದರೆ ಅದಕ್ಕೆ ಪ್ರತ್ಯೇಕ ಅನುದಾನ ನೀಡಲಿ ಎಂದು ಮಜೀದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.