Home ಕರಾವಳಿ ಉಳ್ಳಾಲ | ತನ್ನ ಮೇಲೆ ದಾಳಿಗೆ ಯತ್ನ ನಡೆದಿದೆಯೆಂದು ಕಟ್ಟು ಕಥೆ ಹೆಣೆದ ಬಿಜೆಪಿ ಕಾರ್ಯಕರ್ತನ...

ಉಳ್ಳಾಲ | ತನ್ನ ಮೇಲೆ ದಾಳಿಗೆ ಯತ್ನ ನಡೆದಿದೆಯೆಂದು ಕಟ್ಟು ಕಥೆ ಹೆಣೆದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕ್ರಮ : ಮಂಗಳೂರು ಕಮಿಷನರ್

ಮಂಗಳೂರು: ದುಷ್ಕರ್ಮಿಗಳು ತನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಟ್ಟು ಕಥೆ ಹೆಣೆದ ಬಿಜೆಪಿ ಕಾರ್ಯಕರ್ತ ಕಿಶೋರ್ ಗೆ ಸಂಕಷ್ಟ ಎದುರಾಗಿದೆ. ಆತನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.


ಉಚ್ಚಿಲ ಜಾಲ ಹಿತ್ತಿಲು ನಿವಾಸಿ ಕಿಶೋರ್ ಸಾಲ್ಯಾನ್ ಎಂಬುವವರು ಈ ಕಟ್ಟು ಕಥೆ ಹೆಣೆದಿದ್ದು, ಕೂಲಿ ಕೆಲಸಕ್ಕೆ ತೆರಳುತ್ತಿದ್ದಾಗ ಮೂವರು ಆಗಂತುಕರು ಮಾರಕಾಸ್ತ್ರಗಳನ್ನು ಹಿಡಿದು ಅಟ್ಟಾಡಿಸಿದ್ದಾರೆ. ನಾನು ಪ್ರಾಣ ಉಳಿಸಲು ಅಲ್ಲೇ ಇದ್ದ ಮುಸ್ಲಿಮರ ಅಂಗಡಿಯೊಂದಕ್ಕೆ ನುಗ್ಗಿದೆ. ಆಗಂತುಕರು ಬಳಿಕ ಪರಾರಿಯಾಗಿದ್ದಾರೆ ಎಂದು ಹೇಳಿದ್ದರು.


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಪೊಲೀಸ್ ವಿಚಾರಣೆ ವೇಳೆ ವ್ಯಕ್ತಿ ಸತ್ಯ ಒಪ್ಪಿಕೊಂಡಿದ್ದು, ಆತನ ಮೇಲೆ ಯಾವುದೇ ಅಟ್ಯಾಕ್ ಆಗಿಲ್ಲ. ಯಾರು ಕೂಡ ಬೆನ್ನಟ್ಟಿ ಬಂದಿಲ್ಲ, ಅಲ್ಲದೆ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ಕಿಶೋರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಇತ್ತೀಚಿಗೆ ಕಾಪು ಪ್ರಖಂಡ ಬಜರಂಗದಳ ಸಂಚಾಲಕ ಸುಧೀರ್ ಸೋನು ಅಲಿಯಾಸ್ ನಾಮ ಸುಧೀರ್ ಎಂಬವರ ಮನೆಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಸುಧೀರ್ ಸೋನು ಶಿರ್ವ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.


ಆದರೆ ಮಂಗಳವಾರ ಜಾಮೀನು ಮಂಜೂರು ಮಾಡಲಾಗಿದ್ದು, ಆರೋಪಿಗಳು ಮತ್ತು ಸುಧೀರ್ ನಡುವೆ ಹಲವು ವರ್ಷಗಳಿಂದ ಹಣದ ಲೇವಾದೇವಿ ನಡೆಯುತ್ತಿದೆ ಎಂದು ತಿಳಿದು ಬಂದಿತ್ತು.


ಸುಖ ಸುಮ್ಮನೆ ಕೋಮು ಘರ್ಷಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Join Whatsapp
Exit mobile version