Home ಟಾಪ್ ಸುದ್ದಿಗಳು ಮದರಸಾಗಳ ಬಗ್ಗೆ ಆರೋಪ ಮಾಡುವ ಶರಣ್ ಪಂಪ್ವೆಲ್ ವಿರುದ್ಧ ಕ್ರಮಕೈಗೊಳ್ಳಬೇಕು: ಕೆ.ಕೆ. ಶಾಹುಲ್ ಹಮೀದ್

ಮದರಸಾಗಳ ಬಗ್ಗೆ ಆರೋಪ ಮಾಡುವ ಶರಣ್ ಪಂಪ್ವೆಲ್ ವಿರುದ್ಧ ಕ್ರಮಕೈಗೊಳ್ಳಬೇಕು: ಕೆ.ಕೆ. ಶಾಹುಲ್ ಹಮೀದ್

ಭಯ ಉತ್ಪಾದಿಸುವ ಶರಣ್ ಪಂಪ್ವೆಲ್ ಮದರಸಾದಲ್ಲಿ ಕಲಿತಿಲ್ಲ

ಮಂಗಳೂರು : ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ನಡೆದ ಸ್ಫೋಟ ಸಂಬಂಧವಾಗಿ ವಿಹೆಚ್‌ಪಿ ಮುಖಂಡ ಶರಣ್ ಪಂಪ್ವೆಲ್ ಮದರಸಾಗಳ ಮೇಲೆ ಆರೋಪ ಹೊರಿಸಿ ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದರಸಾಗಳಲ್ಲಿ ಹುಡುಕಿದರೆ ಬಾಂಬ್ ಸ್ಫೋಟಿಸಿದ ಉಗ್ರನ ಮಾಹಿತಿ ಸಿಗಬಹುದು ಎಂದು ಹೇಳುವ ಶರಣ್ ಪಂಪ್ವೆಲ್‌‌ಗೆ ಆ ಬಗ್ಗೆ ನಿಖರ ಮಾಹಿತಿ ಇದ್ದರೆ ತನಿಖಾ ತಂಡಕ್ಕೆ ದಾಖಲೆ ಸಮೇತ ಮಾಹಿತಿ ಒದಗಿಸಲಿ. ಅದು ಬಿಟ್ಟು ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯದ ಮೇಲೆ ಸುಳ್ಳಾರೋಪ ಹೊರಿಸಿ ಕೋಮು ಪ್ರಚೋದನೆ ಮಾಡಿ ಸಮಾಜವನ್ನು ವಿಭಜಿಸುವ ಕೆಲಸ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಮದರಸಾಗಳಲ್ಲಿ ಕಲಿತವರು ಎಲ್ಲಿ, ಯಾವಾಗ ಬಾಂಬ್ ಸ್ಫೋಟ ಮಾಡಿದ್ದಾರೆ? ಯಾವ ಮೌಲ್ವಿಗಳು ಮದರಸಾಗಳಲ್ಲಿ ಭಯೋತ್ಪಾದನೆ ಕಲಿಸಿಕೊಡುತ್ತಿದ್ದಾರೆ? ಯಾವ ಮದರಸಾ ಭಯೋತ್ಪಾದನೆಯ ತಾಣವಾಗಿದೆ ಎಂದು ಶರಣ್ ಪಂಪ್ವೆಲ್ ದಾಖಲೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮದರಸಾಗಳು ಶಾಂತಿ ಸಾಮರಸ್ಯ ಕಲಿಸಿಕೊಡುವ ತಾಣಗಳೇ ಹೊರತು, ಭಯೋತ್ಪಾದನೆಯ ತಾಣಗಳಲ್ಲ. ಮದರಸಾಗಳಲ್ಲಿ ಕಲಿತವರು ಮತ್ತು ಕಲಿಸಿಕೊಟ್ಟ ಮೌಲ್ವಿಗಳು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಚರಿತ್ರೆಯುಳ್ಳವರು.
ಶರಣ್ ಪಂಪ್ವೆಲ್ ಪ್ರತಿನಿಧಿಸುವ ಸಂಘಟನೆಯವರು ಈ ದೇಶದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದುಕೊಂಡು ಬ್ರಿಟಿಷರ ಸೇವೆ ಮಾಡಿದವರು. ಕಳೆದ ಮೂರು ದಶಕಗಳಲ್ಲಿ ಈ ದೇಶದಲ್ಲಿ ಹಲವು ಭಯೋತ್ಪಾದನಾ ಕೃತ್ಯ ಎಸಗಿರುವ ಚರಿತ್ರೆಯೂ ಅವರಿಗಿದೆ. ದೇಶದಲ್ಲಿ ನಡೆದಿರುವ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಸಂಘಪರಿವಾರಕ್ಕೆ ಸೇರಿದವರು ಸಿಕ್ಕಿಬಿದ್ದಿದ್ದಾರೆ. ಅಜ್ಮೀರ್ ಸ್ಫೋಟ, ಮಾಲೇಂಗಾವ್ ಸ್ಫೋಟ, ಸಂಜೋತಾ ರೈಲು ಸ್ಫೋಟ, ಮಕ್ಕಾ ಮಸೀದಿ ಸ್ಫೋಟ ಸೇರಿದಂತೆ ಈ ದೇಶದಲ್ಲಿ ನಡೆದ ಹಲವು ಬಾಂಬ್ ಸ್ಫೋಟಗಳಲ್ಲಿ ಸಂಘಪರಿವಾರಕ್ಕೆ ಸೇರಿದವರು ಆರೋಪಿಗಳಾಗಿದ್ದಾರೆ. ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಾಂಬ್ ತಯಾರಿಸುವ ವೇಳೆ ಬಾಂಬ್ ಸ್ಫೋಟಗೊಂಡು ಸಂಘಪರಿವಾರದ ಸದಸ್ಯರು ಗಾಯಗೊಂಡ ಮತ್ತು ಸಾವನ್ನಪ್ಪಿರುವ ಪ್ರಕರಣಗಳಿವೆ ಎಂದ ಶಾಹುಲ್ ಹಮೀದ್,
ಈ ದೇಶದಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಾಗಿಯಾಗಿರುವ ಬಹುಮಂದಿಗೆ ಮಂದಿಗೆ ಆರ್‌ಎಸ್‌ಎಸ್ ಜೊತೆ ಸಂಪರ್ಕ ಇದೆ ಎಂದು 2013ರಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದ ಆರ್.ಕೆ ಸಿಂಗ್ ( ಸದ್ಯ ಕೇಂದ್ರ ಸಚಿವ) ಹೇಳಿದ್ದರು ಎಂದು ನೆನಪಿಸಿದ್ದಾರೆ.

ಆರ್‌ಎಸ್‌ಎಸ್‌ನವರ ಬಾಂಬ್ ತಯಾರಿಕೆ ಮತ್ತು ಸ್ಫೋಟದ ಬಗ್ಗೆ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದ ಯಶ್ವಂತ್ ಶಿಂಧೆ ಎಂಬವರು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸಂಘಪರಿವಾರದವರು ಮದರಸಾಗಳಲ್ಲಿ ಕಲಿತು ಬಂದವರಲ್ಲ. ಸದಾ ದ್ವೇಷ ಭಾಷಣ ಮಾಡುತ್ತಾ ಕಡಿ ಬಡಿ ಹೊಡಿ ಕೊಚ್ಚಿ ಕೊಲ್ಲಿ ಎಂದು ಪ್ರಚೋದನೆ ಮಾಡಿ ಸಮಾಜದಲ್ಲಿ ಭಯ ಉತ್ಪಾದಿಸುವ ಶರಣ್ ಪಂಪ್ವೆಲ್ ಕೂಡ ಮದರಸಾದಲ್ಲಿ ಕಲಿತವರಲ್ಲ. ಅವರೆಲ್ಲ ಶಾಖೆಯಲ್ಲಿ ಕಲಿತು ಬಂದವರು. ಹೀಗಾಗಿ ಶಾಖೆಗಳಲ್ಲಿ ಹುಡುಕಿದರೆ ಹಲವು ಉಗ್ರರು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಶಾಹುಲ್ ಹಮೀದ್ ಹೇಳಿದ್ದಾರೆ.

ಬೆಂಗಳೂರು ಕೆಫೆ ಸ್ಫೋಟದ ಸಂಬಂಧ ಮದರಸಾಗಳ ಮೇಲೆ ಸುಳ್ಳಾರೋಪ ಮಾಡಿರುವ ಶರಣ್ ಪಂಪ್ವೆಲ್‌ಗೆ ಸಮಾಜದಲ್ಲಿ ಕ್ಷೋಭೆಯುಂಟುಮಾಡುವ ದುರುದ್ದೇಶ ಇದೆ. ಹೀಗಾಗಿ ಆತನ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ದ.ಕ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಪ್ರಕಟನಡಯಲ್ಲಿ ಹೇಳಿದ್ದಾರೆ‌.

Join Whatsapp
Exit mobile version