ಕರಾಚಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಸಾಗುತ್ತಿದ್ದ ವ್ಯಾನ್ ಪ್ರವಾಹ ನೀರಿನಿಂದ ತುಂಬಿದ ಆಳವಾದ ಕಂದಕಕ್ಕೆ ಬಿದ್ದು ಒಂದೇ ಕುಟುಂಬದ 12 ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಯಾತ್ರಿಕರು ಸೆಹ್ವಾನ್ ಷರೀಫ್‌ನಲ್ಲಿರುವ ಸೂಫಿ ಮಸೀದಿ ಕಡೆಗೆ ಹೋಗುತ್ತಿದ್ದಾಗ ಖೈರ್‌ಪುರ ಬಳಿಯ ಸಿಂಧೂ ಹೆದ್ದಾರಿಯ ಪಕ್ಕದ 30 ಅಡಿ ಅಗಲದ ಕಂದಕಕ್ಕೆ ವ್ಯಾನ್ ಬಿದ್ದಿದೆ. ಅಲ್ಲಿ ಇತ್ತೀಚಿನ ಪ್ರವಾಹದ ಸಂದರ್ಭದಲ್ಲಿ ನೀರು ಸಂಗ್ರಹವಾಗಿತ್ತು.
“ಎಲ್ಲಾ ಪ್ರಯಾಣಿಕರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಝಿಯಾರತ್ ಗಾಗಿ ಮಸೀದಿಗೆ ಭೇಟಿ ನೀಡುತ್ತಿದ್ದರು. ಮಾರ್ಗದುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಇಟ್ಟಿರುವುದನ್ನು ನೋಡದ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಕಂದಕಕ್ಕೆ ಉರುಳಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.