Home ಟಾಪ್ ಸುದ್ದಿಗಳು ವಿದ್ಯಾರ್ಥಿನಿಯ ಮೇಲೆ ಆಸಿಡ್ ದಾಳಿ| AIMSS ಖಂಡನೆ

ವಿದ್ಯಾರ್ಥಿನಿಯ ಮೇಲೆ ಆಸಿಡ್ ದಾಳಿ| AIMSS ಖಂಡನೆ

ರಾಮನಗರ: ಜಿಲ್ಲೆಯ ಕನಕಪುರದ ಬೈಪಾಸ್ ಬಳಿ ವಿದ್ಯಾರ್ಥಿನಿಯ ಮೇಲೆ ನಡೆದ ಆಸಿಡ್ ದಾಳಿಯನ್ನು AIMSS (ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ) ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟನೆಯನ್ನು ಬಿಡುಗಡೆ ಮಾಡಿದ AIMSS ರಾಜ್ಯ ಜಂಟಿ ಕಾರ್ಯದರ್ಶಿ ಎ ಶಾಂತ, ಪ್ರೀತಿ ನಿರಾಕರಿಸಿದ ಕಾರಣದಿಂದ 17 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬ ಆಸಿಡ್ ದಾಳಿ ನಡೆಸಿ ಮುಖದಲ್ಲಿ ಕಣ್ಣು, ಕುತ್ತಿಗೆ ಹಾಗೂ ಎದೆ ಭಾಗದಲ್ಲೆಲ್ಲಾ ಗಾಯಗೊಳಿಸಿದ ಘಟನೆ ಜಿಲ್ಲಾ ಜನತೆಯಲ್ಲಿ ಅದರಲ್ಲೂ ಮಹಿಳೆಯರಲ್ಲಿ ತೀವ್ರ ಆಘಾತ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೈಹಿಕವಾಗಿ ಹಾಗೂ ಮಾನಸಿಕವಾಗಿ ಅತ್ಯಂತ ಕ್ಷೋಭೆಗೆ ಒಳಗಾದ ಆ ನತದೃಷ್ಟ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆಯಾಗಿರುವುದು ತಿಳಿದುಬಂದಿದೆ. ಇಂತಹ ದುಷ್ಕೃತ್ಯ ನಡೆದಿದ್ದು ಇಡೀ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದ್ದು, ಹೆಣ್ಣುಮಕ್ಕಳ ರಕ್ಷಣೆಯ ಕುರಿತಂತೆ ಆತಂಕ ಮೂಡಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ದುಷ್ಕರ್ಮಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆಡಳಿತ ಸರ್ಕಾರಗಳ ನೀತಿಗಳು ನಿರಂತರವಾಗಿ ಸಾಮಾಜಿಕ – ಸಾಂಸ್ಕೃತಿಕ ವಾತಾವರಣವನ್ನು ಕುಲಗೆಡಿಸಿ, ಯುವಜನರಲ್ಲಿ ಸ್ವಾರ್ಥ, ಅಪರಾಧೀ ಮನೋಭಾವಗಳನ್ನು ಹೆಚ್ಚಾಗಿಸಿವೆ. ಅಶ್ಲೀಲತೆ-ಕುಸಂಸ್ಕೃತಿಯನ್ನು ಎಲ್ಲಡೆ ವ್ಯಾಪಿಸಲು, ಕುಸಂಸ್ಕೃತಿ ಹರಡಲು ಅವಕಾಶ ಮಾಡಿಕೊಟ್ಟು ವಿಕೃತ ಮನೋಭಾವವನ್ನು ಬೆಳೆಸುತ್ತಿವೆ. ಈ ಕಾರಣದಿಂದ ಇಂತಹ ಘಟನೆಗಳು ಪದೇಪದೇ ನಡೆಯುತ್ತಲೇ ಇವೆ ಎಂದು ಶಾಂತ ಹೇಳಿದ್ದಾರೆ.

ಪ್ರೀತಿಸುವಂತೆ ಹೆಣ್ಣುಮಕ್ಕಳ ಹಿಂದೆ ಬಿದ್ದು ಅವರನ್ನು ಪೀಡಿಸುವುದು ಸಾಮಾಜಿಕ ಪಿಡುಗಾಗಿದೆ. ಸ್ಟಾಕಿಂಗ್ ಸಿಂಡ್ರೋಮ್, ಆಸಿಡ್ ದಾಳಿ ಇವುಗಳಿಗೆ ಕಾನೂನುಗಳಿದ್ದರೂ ಅವು ಸರಿಯಾದ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ. ಸರ್ಕಾರವು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ, ಸಂತ್ರಸ್ತೆಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

AIMSS ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳು

  1. ಆರೋಪಿ ಎಷ್ಟೇ ಪ್ರಭಾವಿಯಿರಲಿ, ಎಷ್ಟೇ ಹಣವಂತನಾಗಿರಲಿ, ಏನೂ ಲೆಕ್ಕಿಸದೆ ಆರೋಪಿಗೆ ಉಗ್ರಶಿಕ್ಷೆಯನ್ನು ಖಾತರೀಪಡಿಸಿ.
  2. ಸಂತ್ರಸ್ತೆ ಸಂಪೂರ್ಣವಾಗಿ ಗುಣವಾಗಲು ಎಷ್ಟೇ ಖರ್ಚಾದರೂ ಉಚಿತ ಚಿಕಿತ್ಸೆ ಖಾತ್ರಿಪಡಿಸಿ.
  3. ಎಲ್ಲಾ ತೆರನಾದ ಅಶ್ಲೀಲತೆಗಳ ಪ್ರಚಾರದ ವಿರುದ್ಧ ಉಗ್ರ ಕ್ರಮ ಕೈಗೊಳ್ಳಿ.
Join Whatsapp
Exit mobile version