ಬೆಂಗಳೂರು: ವಿಧಾನ ಸೌಧದಲ್ಲಿ ಸಂಘಪರಿವಾರದ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ಫೋಟೋ ಅಳವಡಿಕೆ ಸಂಬಂಧ ಸ್ಪೀಕರ್ ಯುಟಿ ಖಾದರ್ ವಿರುದ್ಧ ಅವಹೇಳಲನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದಲ್ಲಿ ಎಸ್ಡಿಪಿಐ ರಾಜ್ಯ ನಾಯಕ ರಿಯಾಝ್ ಕಡಂಬುರವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾವರ್ಕರ್ ಫೋಟೋ ಸಂಬಂಧವಾಗಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಅವಹೇಳನಕಾರಿ ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್, ಇಕಾನಾಮಿಕ್ ಹಾಗೂ ನಾರ್ಕೋಟಿಕ್ಸ್ (ಸೆನ್) ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಗರದ ಉರ್ವ ಠಾಣೆಯ ಪೊಲೀಸರು ರಿಯಾಝ್ ಕಡಂಬು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ರಿಯಾಝ್ ವಿರುದ್ಧ ಪೊಲೀಸರ ಸ್ವಯಂ ಪ್ರೇರಿತ ದೂರಿನಲ್ಲಿ ಏನಿದೆ?
ಮುಹಮ್ಮದ್ ರಿಯಾಝ್ ಕಡಂಬು ವಿಧಾನ ಸೌಧದಲ್ಲಿ ಸಾವರ್ಕರ್ ಫೋಟೋ ತೆರವುಗೊಳಿಸದೇ ಇರೋದರ ಸಂಬಂಧವಾಗಿ ಡಿ.10ರಂದು ಸ್ಪೀಕರ್ ಯು.ಟಿ.ಖಾದರ್‌ರ ಭಾವ ಚಿತ್ರವನ್ನು ಎಡಿಟ್ ಮಾಡಿ ಖಾದರ್ ಫೋಟೋಗೆ ಸಾವರ್ಕರ್ ಹಾಕಿರುವ ಟೋಪಿಯನ್ನು ಹಾಕಿದ್ದರು. ಜೊತೆಗೆ “ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್” ಎಂದೂ, “ಆತ ಬ್ರಿಟಿಷರೊಂದಿಗೆ ಕ್ಷಮಾಪಣಾ ಪತ್ರ ಬರೆದರೆ ಈತ ಸಂಘಿಗಳೆದುರು ಮಂಡಿಯೂರಿದ ಸಭಾಧ್ಯಕ್ಷ…” ಎಂದೂ, “ಇಷ್ಟೇ ಅದ್ಯಾವ ಪರಿಸರ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ. ಚುನಾವಣೆಯಲ್ಲಿ ಕೇಳ್ತಿದ್ರಲ್ಲಾ ಎಸ್‌ಡಿಪಿಐ ಯಾಕೆ ಒಬ್ಬ ಮುಸ್ಲಿಂ ಎಂಎಲ್‌ಎ ವಿರುದ್ಧ ಸ್ಪರ್ಧೆ ಮಾಡುವುದು ಅಂತ. ನೋಡಿ ಉತ್ತರ ಸ್ಪಷ್ಟವಿದೆ. ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ, ಕೋಮುವಾದಿ ಆರೆಸ್ಸೆಸ್ಟ್ ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿರುವುದಕ್ಕೆ ಎಂದಾದರು ಒಂದು ದಿನ ಎಸ್‌ಡಿಪಿಐ ಅದರೊಳಗೆ ಲಗ್ಗೆ ಇಟ್ಟರೆ ಕಿತ್ತು ಬಿಸಾಕಿಯೆ ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ ಕೂಡಾ. ಈ ಸಭಾಧ್ಯಕ್ಷರಿಗೆ ಚಾಲೆಂಜ್ ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ” ಎಂದೂ ಬರೆದಿದ್ದರು. ಅಲ್ಲದೆ, ಮುಹಮ್ಮದ್ ಮುಸ್ತಫಾ ಎಂಬ ನಕಲಿ ಫೇಸ್‌ಬುಕ್ ಖಾತೆಯಲ್ಲಿ ವೇಷಧಾರಿ ಎಂಬುದಾಗಿ ಬರೆದು ಸ್ಪೀಕರ್ ಅವರ ಭಾವಚಿತ್ರವನ್ನು ಹಾಕಿರುವುದು ಕಂಡು ಬಂದಿರುತ್ತದೆ ಎಂದು ಪೊಲೀಸರ ಸ್ವಯಂ ಪ್ರೇರಿತ ದೂರಿನಲ್ಲಿ ತಿಳಿಸಲಾಗಿದೆ.
ಮುಹಮ್ಮದ್ ರಿಯಾಝ್ ಮತ್ತು ಮುಹಮ್ಮದ್ ಮುಸ್ತಫಾ ಎಂಬ ಫೇಸ್‌ಬುಕ್ ಖಾತೆದಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶಗಳನ್ನು ಕಳುಹಿಸುವ ಮೂಲಕ ಕೋಮು ಭಾವನೆ ಕೆರಳಿಸುವಂತೆ ಮಾಡಲು ಉದ್ದೇಶ ಪೂರ್ವಕವಾಗಿ ಪೋಸ್ಟ್‌ಗಳನ್ನು ಹಾಕಿರುವುದು ಕಂಡು ಬಂದಿರುವುದರಿಂದ ಈ ಎರಡೂ ಫೇಸ್‌ಬುಕ್ ಖಾತೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ಪೊಲೀಸರ ನಡೆಗೆ ಎಸ್ಡಿಪಿಐ ಮತ್ತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.