Home ಟಾಪ್ ಸುದ್ದಿಗಳು 5 ಸಾವಿರ ಕಾರುಗಳನ್ನು ಕದ್ದು ಮೂವರು ಪತ್ನಿಯರ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದ ಕದೀಮನ ಸೆರೆ

5 ಸಾವಿರ ಕಾರುಗಳನ್ನು ಕದ್ದು ಮೂವರು ಪತ್ನಿಯರ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದ ಕದೀಮನ ಸೆರೆ

►ಕೆಲವೆಡೆ ಚಾಲಕರನ್ನು ಕೊಂದು ಕಾರು ಕದ್ದಿದ್ದ ಅನಿಲ್ ಚೌಹಾಣ್

ನವದೆಹಲಿ: ದೇಶದ ಅತಿದೊಡ್ಡ ಕಾರು ಕಳ್ಳನನ್ನು ಸೆರೆ ಹಿಡಿಯುವಲ್ಲಿ ರಾಜಧಾನಿ ದೆಹಲಿಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ 27 ವರ್ಷಗಳ ಕಳ್ಳತನದ ಇತಿಹಾಸ ಹೊಂದಿರುವ ಬಂಧಿತ ಅನಿಲ್ ಚೌಹಾಣ್ (52) ದೇಶದ ವಿವಿಧೆಡೆ 5,000ಕ್ಕೂ ಹೆಚ್ಚು ಕಾರುಗಳನ್ನು ಕಳವು ಮಾಡಿದ್ದಾನೆ.

ಮೂವರು ಪತ್ನಿಯರು 7 ಮಕ್ಕಳ ತಂದೆಯಾದ ಆರೋಪಿ ಅನಿಲ್ ಚೌಹಾಣ್ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ, ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈತ ಆಸ್ತಿಗಳನ್ನು ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

1995ಕ್ಕೂ ಮೊದಲು ದೆಹಲಿಯಲ್ಲಿ ಆಟೋ ರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಅನಿಲ್, ನಂತರ ಕಾರು ಕಳ್ಳತನ ಮಾಡಲು ಶುರು ಮಾಡಿದ್ದ. ಆರಂಭದ ದಿನಗಳಲ್ಲಿ ಮಾರುತಿ 800 ಕಾರುಗಳಿಗೇ ಹೆಚ್ಚು ಕಣ್ಣು ಹಾಕುತ್ತಿದ್ದ.

ಹೀಗೆ ಕದ್ದ ವಾಹನಗಳನ್ನು ನೇಪಾಳ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ. ಕಳ್ಳತನದ ಸಂದರ್ಭದಲ್ಲಿ ಕೆಲವು ಟ್ಯಾಕ್ಸಿ ಚಾಲಕರನ್ನು ಕೊಂದಿದ್ದಾಗಿಯೂ ಆರೋಪಿ ಬಾಯ್ಬಿಟ್ಟಿದ್ದಾನೆ.

2015ರಲ್ಲಿ ಕಾಂಗ್ರೆಸ್ ಶಾಸಕನೊಂದಿಗೆ ಈತ ಸುಮಾರು 5 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ. ಇದಾದ ಬಳಿಕ 2020ರಲ್ಲಿ ಬಿಡುಗಡೆಯಾಗಿದ್ದಾನೆ. ಅನಿಲ್ ಚೌಹಾಣ್ ವಿರುದ್ಧ ಒಟ್ಟು 180 ಪ್ರಕರಣಗಳು ದಾಖಲಾಗಿವೆ.

ಕಳೆದ ಕೆಲ ತಿಂಗಳಿಂದ ಅಸ್ಸೋಂನಲ್ಲಿ ವಾಸವಾಗಿದ್ದು, ಅಲ್ಲಿನ ಸ್ಥಳೀಯ ರಾಜಕೀಯ ಮುಖಂಡರೊಂದಿಗೂ ಸಂಪರ್ಕದಲ್ಲಿದ್ದ. ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ಈಶಾನ್ಯ ರಾಜ್ಯಗಳ ನಿಷೇಧಿತ ಸಂಘಟನೆಗಳಿಗೆ ರವಾನಿಸಿದ್ದಾನೆ. ಪೊಲೀಸರು 6 ಪಿಸ್ತೂಲ್, 7 ಕಾಟ್ರಿಡ್ಜ್ ಅನ್ನು ಆರೋಪಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

Join Whatsapp
Exit mobile version