ಕೋಲಾರ: ಗ್ರಾಮ ದೇವತೆ ಮೆರವಣಿಗೆ ವೇಳೆ ದಲಿತ ಬಾಲಕನೋರ್ವ ದೇವರ ಕೋಲು ಮುಟ್ಟಿದ ಕಾರಣಕ್ಕೆ, ಬಾಲಕನಿಗೆ ಥಳಿಸಿದ ಸವರ್ಣೀಯರು, ಬಾಲಕನ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿ ಅರವತ್ತು ಸಾವಿರ ರೂ. ದಂಡವನ್ನು ವಿಧಿಸಿದ ಆಘಾತಕಾರಿ ಘಟನೆ ಮಾಲೂರು ತಾಲೂಕಿನ ಹುಳ್ಳೇರಹಳ್ಳಿ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಳ್ಳೇರಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾದ ದೇವಾಲಯದ ಉತ್ಸವದ ವೇಳೆ ಪಲ್ಲಕ್ಕಿ ಹೊರುತ್ತಿದ್ದವನ ಕೈ ಜಾರಿ ಬಿದ್ದ ದೇವರ ಗುಜ್ಜ ಕೋಲನ್ನು ದಲಿತ ಬಾಲಕ ಚೇತನ್ , ತೆಗೆದು ಕೊಟ್ಟಿದ್ದ. ಈ ಕಾರಣದಿಂದ ದೇವರಿಗೆ ಮೈಲಿಗೆ ಆಗಿದೆ. ಆದ್ದರಿಂದ ದೇವರಿಗೆ ಶಾಂತಿ ಮಾಡಿ ಹೊಸ ಉತ್ಸವ ಏರ್ಪಡಿಸಬೇಕು. ಅದರ ಸಂಪೂರ್ಣ ಖರ್ಚು ಬಾಲಕನ ಕುಟುಂಬ ಹೊರಬೇಕು ಎಂದು ಮೇಲ್ಜಾತಿಯವರು ಬೆದರಿಕೆ ಹಾಕಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಚೇತನ್ ಮನೆಗೆ ಭೇಟಿ ನೀಡಿರುವ ಪ್ರಗತಿಪರ ಸಂಘಟನೆ ಹಾಗೂ ದಲಿತ ಸಂಘಟನೆಗಳ ಮುಖಂಡರು, ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದ್ದಾರೆ. ಬಾಲಕ ಚೇತನ್ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು, ತಾಯಿ ಶೋಭಾ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. “ನಾವು ದಿನಕ್ಕೆ ಮುನ್ನೂರು ರೂಪಾಯಿ ಕೂಲಿ ಮಾಡೋರು. ಅರವತ್ತು ಸಾವಿರ ರೂ.ಗಳನ್ನು ಎಲ್ಲಿಂದ ತಂದುಕೊಡಲಿ ಎಂದು ಕಣ್ಣೀರು ಹಾಕಿದರು.
ಅಕ್ಟೋಬರ್ 1 ರೊಳಗೆ ಉತ್ಸವದ ಖರ್ಚು ಪಾವತಿಸದಿದ್ದರೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಬೆದರಿಕೆಯೊಡ್ಡಲಾಗಿದೆ ಎಂದು ಬಾಲಕನ ತಾಯಿ ಮಾಸ್ತಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮದ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.