ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಬಹುಕೋಟಿ ಹಗರಣ ಬಯಲಿಗೆಳೆದಿರುವ ಭ್ರಷ್ಟಾಚಾರ ನಿಗ್ರಹ ದಳದ -ಎಸಿಬಿ ಅಧಿಕಾರಿಗಳು ಸತತ ಮೂರನೇ ದಿನವಾದ ಮಂಗಳವಾರ ಕೂಡ ದಾಳಿ ಮುಂದುವರೆಸಿ ಮೂಲ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ನ.19ರಿಂದ ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 134 ಕೋಟಿ ರೂ. ಮೌಲ್ಯದ ಭೂ ಅಕ್ರಮ ಪತ್ತೆ ಹಚ್ಚಿದ್ದರು. ಅಕ್ರಮಕ್ಕೆ ಸಂಬಂಧಿಸಿದ ದಾಖಲಾತಿ ಜಪ್ತಿ ಮಾಡಿಕೊಂಡಿದ್ದರು.
ನ.19ರಿಂದ ಭಾನುವಾರ ಹಾಗೂ ಸೋಮವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ದಾಳಿಯನ್ನು ಇಂದು ಮುಂದುವರೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.
ಬಿಡಿಎ ಕಚೇರಿಯಲ್ಲಿ ಭೂ ಅಕ್ರಮಕ್ಕೆ ಸಂಬಂಧಿಸಿ ದಾಖಲಾತಿಗಳನ್ನು ಈಗಾಗಲೇ ಜಪ್ತಿ ಮಾಡಿಕೊಂಡಿರುವ ಎಸಿಬಿ, ಮೂಲ ದಾಖಲಾತಿ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಒಂದು ವೇಳೆ, ಅಗತ್ಯ ಮೂಲ ದಾಖಲಾತಿ ನೀಡದಿದ್ದಲ್ಲಿ ಕಂದಾಯ ಇಲಾಖೆಯಿಂದ ಪಡೆಯಲು ಮುಂದಾಗಿದೆ.
ಹತ್ತಾರು ವರ್ಷಗಳಿಂದ ಅಕ್ರಮವೆಸಗಿ ಸಂಬಂಧಿಸಿದ ದಾಖಲಾತಿಗಳಿಲ್ಲ ಎಂದು ನೆಪವೊಡ್ಡಿ ನುಣುಚಿಕೊಳ್ಳುತ್ತಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗೆ ಎಸಿಬಿ ದಾಳಿಯು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿವಾದಿತ ಅರ್ಕಾವತಿ, ಕೆಂಪೇಗೌಡ ಹಾಗೂ ಶಿವರಾಮ್ ಕಾರಂತ್ ಬಡಾವಣೆಗಳಲ್ಲಿ ಬಿಡಿಎ ಹಂಚಿಕೆ ಮಾಡಿರುವ ನಿವೇಶನಗಳು ಹಾಗೂ ಬಡಾವಣೆಗಾಗಿ ಭೂ ಸ್ವಾಧೀನಕ್ಕಾಗಿ ಪಡೆದಿರುವ ಜಾಗಗಳ ದಾಖಲಾತಿಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ಮೂಲ ದಾಖಲಾತಿಗಳ ಶೋಧ ನಡೆಸುತ್ತಿದ್ದು ಅಸಲಿ ದಾಖಲಾತಿಗಾಗಿ ಕಂದಾಯ ಇಲಾಖೆಯಿಂದ ಪಡೆಯಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಎ ಸೈಟಿನಲ್ಲಿ ಅಕ್ರಮ ಬಿಡಿಎ ನಾಗರಿಕ ನಿವೇಶನ (ಸಿಎ)ಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಬಿಡಿಎ ಅಧಿಕಾರಿಗಳು ದಾಖಲಾತಿಗಳಿಗೆ ತಿದ್ದುಪಡಿ ಮಾಡಿರುವುದು ತಿಳಿದು ಬಂದಿದೆ. ಸಾರ್ವಜನಿಕ ಬಳಕೆಗೆ ಮೀಸಲಿರಿಸಬೇಕಿದ್ದ ಸಿಎ ಸೈಟುಗಳ ಹಂಚಿಕೆಯಲ್ಲಿ ದುರ್ಬಳಕೆ ನಡೆದಿರುವುದು ಗೊತ್ತಾಗಿದೆ. ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ತಿಳಿದು ಬಂದಿದೆ.