ಜುಲೈ 1ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ

Prasthutha|

ಬೆಂಗಳೂರು : ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2021-22ನೇ ಸಾಲಿನ ಶೈಕ್ಷಣಿಕ ವರ್ಷವು ಜು.1ರಿಂದ ಆರಂಭಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗುವಂತೆ, ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಿ ಅನುಷ್ಠಾನಗೊಳಿಸಲು ತಿಳಿಸಲಾಗಿದೆ.

- Advertisement -

ಶಾಲಾ ಅವಧಿ: ಜುಲೈ 1ರಿಂದ ಅಕ್ಟೋಬರ್ 9ರವರೆಗೆ ಮೊದಲ ಅವಧಿಯಾಗಿರುತ್ತದೆ. ಅ.10ರಿಂದ 20ರವರೆಗೆ ದಸರಾ ರಜೆ ಇರುತ್ತದೆ. ನಂತರ ಅ.21ರಿಂದ ಎ.20ರವರೆಗೆ ಎರಡನೆ ಶೈಕ್ಷಣಿಕ ಅವಧಿಯಿರುತ್ತದೆ. ನಂತರ ಮೇ 1ರಿಂದ 28ರವರೆಗೆ ಬೇಸಿಗೆ ರಜೆ ಇರುತ್ತದೆ. ಒಟ್ಟಾರೆ ಈ ಶೈಕ್ಷಣಿಕ ಸಾಲಿನಲ್ಲಿ ಬೋಧನಾ ಪ್ರಕ್ರಿಯೆಗೆ ಒಟ್ಟು 223 ದಿನಗಳು ಲಭ್ಯವಾಗಿರುತ್ತದೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

-ಮಕ್ಕಳ ಶಾಲಾ ಪ್ರವೇಶಾತಿಯನ್ನು ಜೂ.15ರಿಂದ ಆರಂಭಿಸಿ ಆ.31ರೊಳಗೆ ಮುಕ್ತಾಯಗೊಳಿಸಬೇಕು.

►ಕೋವಿಡ್-19ರ ಪ್ರತಿಕೂಲ ಸನ್ನಿವೇಶದ ಹಿನ್ನೆಲೆಯಲ್ಲಿ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸಲು ಪರಿಸ್ಥಿತಿ ಸಹಕಾರಿಯಾಗದಿದ್ದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರ್ಯಾಯ ಮಾರ್ಗಗಳನ್ನು(ದೂರದರ್ಶನ, ಸಂವೇದ, ಬಾನುಲಿ, ಆನ್‍ಲೈನ್ ಮತ್ತು ಇತರ ಆಫ್‍ಲೈನ್) ಬಳಸಿಕೊಂಡು ಮಕ್ಕಳ ಪಾಠ-ಪ್ರವಚನಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಲಿಕೆ ಮತ್ತು ಮೌಲ್ಯ ಮಾಪನ ಕಾರ್ಯದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕು.

►ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು.

►ಪ್ರಾಥಮಿಕ ಶಾಲಾ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಎ.29ರಂದು ಹಾಗೂ ಪ್ರೌಢ ಶಾಲಾ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಎ.30ರಂದು ನಡೆಸುವುದು.

►ಕ್ರಿಸ್‍ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಿದ್ದಲ್ಲಿ ಈ ಬಗ್ಗೆ ಆಯಾ ಉಪ ನಿರ್ದೇಶಕರು ಈ ಕುರಿತು ಪರಿಶೀಲಿಸಿ ನಿರ್ಧರಿಸುವುದು.

- Advertisement -