ಅಬುದಾಬಿ: ಜು.16: ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್- ಯುಎಇ ರಾಜಧಾನಿ ಅಬುದಾಬಿಯಲ್ಲಿ ಏಕಾಏಕಿ ರಾತ್ರಿಯ ಲಾಕ್ ಡೌನ್ ಘೋಷಿಸಿದೆ. ಆದರೆ ದೇಶದ ಉಳಿದ ಭಾಗಗಳು ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ.
ಲಾಕ್ಡೌನ್ ಮುಂದಿನ ಸೋಮವಾರದಿಂದ ಪ್ರಾರಂಭವಾಗಲಿದೆ. ಪ್ರತಿದಿನ ರಾತ್ರಿ 12ಯಿಂದ ಬೆಳಿಗ್ಗೆ 5 ಗಂಟೆವರೆಗೆ ಲಾಕ್ ಡೌನ್ ಇರುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಡಬ್ಲ್ಯುಎಎಂ ಸುದ್ದಿ ಸಂಸ್ಥೆ ಪ್ರಕಟಿಸಿದೆ.
ಸೋಮವಾರದಿಂದ ಯುಎಇಯಲ್ಲಿ ಸುದೀರ್ಘ ಈದ್ ಅಲ್-ಅಝ್ ಹ ರಜಾದಿನಗಳು ಆರಂಭವಾಗುತ್ತಿವೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಬುಧಾಬಿ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಲಾಕ್ಡೌನ್ ಘೋಷಿಸಲಾಗಿದೆ ಎನ್ನಲಾಗಿದೆ.
ಅಬುಧಾಬಿಯ ತುರ್ತು, ಬಿಕ್ಕಟ್ಟು ಮತ್ತು ವಿಪತ್ತುಗಳ ಸಮಿತಿಯು ಲಾಕ್ ಡೌನ್ ಅನ್ನು ‘ರಾಷ್ಟ್ರೀಯ ಶುದ್ಧೀಕರಣ ಕಾರ್ಯಕ್ರಮ’ದ ಭಾಗವೆಂದು ಹೇಳಿದೆ. ಕೋವಿಡ್ ಪ್ರಾರಂಭವಾದ 2020 ರ ಲಾಕ್ ಡೌನ್ ಸಮಯದಲ್ಲೂ ಇದೇ ಘೋಷಣೆ ಮಾಡಲಾಗಿತ್ತು.
ವರ್ಷದ ಹಿಂದೆ ದುಬೈ ಪ್ರವಾಸೋದ್ಯಮಕ್ಕೆ ಅನುಮತಿ ನೀಡಿದ ನಂತರ ಅಬುದಾಬಿ ಕಠಿಣ ನಿಲುವು ತಳೆದಿತ್ತು. ಅಬುದಾಬಿ ಪ್ರವೇಶಿಸುವವರಿಗೆ ಆರ್ ಟಿ–ಪಿಸಿಆರ್ ಪರೀಕ್ಷಾ ವರದಿ ಕಡ್ಡಾಯಗೊಳಿಸಲಾಗಿತ್ತು.
ಸಾಮೂಹಿಕ ಲಸಿಕಾ ಕಾರ್ಯಕ್ರಮದ ಹೊರತಾಗಿಯೂ ದುಬೈನಲ್ಲಿ ನಿತ್ಯ 1,500 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಡುತ್ತಿವೆ. ಆದರೂ, ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕೆ ಮುಕ್ತಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಈ ರಾತ್ರಿ ಲಾಕ್ ಡೌನ್ ಘೋಷಿಸಲಾಗಿದೆ.