ಬೆಂಗಳೂರು: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ ನಿರ್ಣಯವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ.4 ಮೀಸಲಾತಿಯನ್ನು ಕಿತ್ತು ಇನ್ನೊಂದು ಸಮುದಾಯಕ್ಕೆ ಹಂಚುವ ಮೂಲಕ ಸಮುದಾಯಗಳ ನಡುವೆ ದ್ವೇಷದ ಬೀಜ ಬಿತ್ತಿ ಮತ ಗಳಿಸುವ ಹುನ್ನಾರ ಮಾಡಿದೆ. ಸರಕಾರ ಅಸಾಂವಿಧಾನಿಕವಾಗಿದೆ ಮತ್ತು ಮುಸ್ಲಿಮರ ವಿರುದ್ಧ ಸರಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಬಿಜೆಪಿ ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲೇ ಇದೆ. ಬರುವ ಚುನಾವಣೆಯಲ್ಲಿ ಇದರ ಕಾವು ಬಿಜೆಪಿಗೆ ತಟ್ಟದೇ ಇರದು ಎಂದು ಹೇಳಿದ್ದಾರೆ.
ಜಾತ್ಯತೀತ ನೆಲೆಗಟ್ಟಿನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸರಕಾರ ವಿಫಲವಾಗಿದೆ. ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಘೋರ ದುರಂತವಾಗಿದೆ. ಎಲ್ಲಾ ಸಮುದಾಯದ ಹಿತ ಕಾಯುವ ಮುಖ್ಯಮಂತ್ರಿ ಎನ್ನುವ ಅಭಿಪ್ರಾಯಕ್ಕೆ ಬಸವರಾಜ ಬೊಮ್ಮಾಯಿ ತಿಲಾಂಜಲಿ ಇಟ್ಟಿದ್ದಾರೆ. ಬಿಜೆಪಿಯ ಕೋಮುದ್ವೇಷ ಈ ತೀರ್ಮಾನದಲ್ಲಿ ಎದ್ದು ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ಕೂಡಲೇ ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ನಿರ್ಧಾರ ಕೈಬಿಡಬೇಕು. ಮತಬ್ಯಾಂಕ್’ಗಾಗಿ ಓಲೈಕೆ ರಾಜಕಾರಣ ಮಾಡಬಾರದು. ಮುಸ್ಲಿಮರ 2ಬಿ ಮೀಸಲಾತಿ ಯಥಾವತ್ತಾಗಿ ಮುಂದುವರೆಸಬೇಕು ಎಂದು ತಾಹೀರ್ ಹುಸೇನ್ ಆಗ್ರಹಿಸಿದರು.