Home ಟಾಪ್ ಸುದ್ದಿಗಳು ನಾಲ್ಕನೇ ಪ್ರಯತ್ನದಲ್ಲಿ ಮೇಯರ್ ಆಯ್ಕೆ ಯಶಸ್ವಿ: ದೆಹಲಿ ಪಾಲಿಕೆ ಮೇಯರ್ ಆಗಿ ಎಎಪಿಯ ಶೆಲ್ಲಿ ಒಬೆರಾಯ್...

ನಾಲ್ಕನೇ ಪ್ರಯತ್ನದಲ್ಲಿ ಮೇಯರ್ ಆಯ್ಕೆ ಯಶಸ್ವಿ: ದೆಹಲಿ ಪಾಲಿಕೆ ಮೇಯರ್ ಆಗಿ ಎಎಪಿಯ ಶೆಲ್ಲಿ ಒಬೆರಾಯ್ ಆಯ್ಕೆ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಮೇಯರ್ ಆಯ್ಕೆಯ ನಾಲ್ಕನೆಯ ಪ್ರಯತ್ನ ಯಶಸ್ವಿಯಾಗಿದ್ದು, ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಅವರು ಒಗ್ಗೂಡಿದ ಮಹಾನಗರ ಪಾಲಿಕೆಯ ಮೊದಲ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.


ಅವರು ದಿಲ್ಲಿಯ ಆಮ್ ಆದ್ಮಿ ಪಕ್ಷದ ಮೊದಲ ಮೇಯರ್ ಸಹ ಹೌದು.
ಜಿದ್ದಾಜಿದ್ದಿನ ಹೋರಾಟದಲ್ಲಿ ಶೆಲ್ಲಿ ಒಬೆರಾಯ್ ಅವರು 34 ಮತಗಳ ಅಂತರದಿಂದ ಗೆದ್ದರು. ಅವರು 150 ಮತಗಳನ್ನು ಪಡೆದರೆ, ಬಿಜೆಪಿಯ ರೇಖಾ ಗುಪ್ತ ಅವರು 116 ಮತ ಮಾತ್ರ ಪಡೆದರು. ಒಟ್ಟು 266 ಮತಗಳಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರು ಆಮ್ ಆದ್ಮಿ ಪಕ್ಷದ ಶೆಲ್ಲಿಯವರನ್ನು ಬೆಂಬಲಿಸಿರುವುದು ಸ್ಪಷ್ಟವಿದೆ.
24 ಗಂಟೆಗಳೊಳಗೆ ಸಭೆ ನಡೆಸಿ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ದಿನ ಗೊತ್ತು ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ ಬಳಿಕ ಇಂದು ಮೇಯರ್ ಆಯ್ಕೆಗೆ ಸಮಯ ಗೊತ್ತು ಪಡಿಸಲಾಗಿತ್ತು.


ಹಿಂದೆ ಜನವರಿ 6, ಜನವರಿ 24, ಫೆಬ್ರವರಿ 6ರಂದು ಬಿಜೆಪಿ- ಎಎಪಿ ನಡುವೆ ಗಲಾಟೆ ನಡೆದುದರಿಂದ ಮೇಯರ್ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿತ್ತು. ಇಂದೂ ಬೆಳಿಗ್ಗೆ ಆ ಗದ್ದಲದ ಲಕ್ಷಣ ಕಂಡುಬಂದಿತಾದರೂ ಸುಪ್ರೀಂಕೋರ್ಟ್ ಆದೇಶದಿಂದಾಗಿ ದೊಡ್ಡ ಕಿತ್ತಾಟ ಏನೂ ಕಂಡುಬರಲಿಲ್ಲ.


250 ಸದಸ್ಯರ ಪಾಲಿಕೆಯಲ್ಲಿ 134 ಸ್ಥಾನ ಗೆದ್ದ ಆಮ್ ಆದ್ಮಿ ಪಕ್ಷವು 15 ವರ್ಷಗಳ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿತ್ತು. ಆದರೆ 104 ಸ್ಥಾನ ಗೆದ್ದಿರುವ ಬಿಜೆಪಿಯು ನೇಮಕಾತಿ ಸದಸ್ಯರ ಮೂಲಕ ಹಾಗೂ ಸಂಸದರ ಮತಗಳನ್ನು ಬಳಸಿ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಇದು ಯಶಸ್ವಿಯಾಗಲಿಲ್ಲ.
ಸಿಜೆಐ ಚಂದ್ರಚೂಡ್, ಪಿ. ಎಸ್. ನರಸಿಂಹ, ಜೆ. ಬಿ. ಪರ್ದಿವಾಲಾರಿದ್ದ ಸುಪ್ರೀ ಕೋರ್ಟು ಪೀಠವು ಮೊದಲ ಎಂಸಿಡಿ ಸಭೆಯಲ್ಲಿ ಮೇಯರ್ ಆಯ್ಕೆ ನಡೆಸಿ, ಬೆನ್ನಿಗೇ ಮೇಯರ್ ನೇತೃತ್ವದಲ್ಲಿ ಉಪ ಮೇಯರ್ ಆಯ್ಕೆ ಇತ್ಯಾದಿ ನಡೆಯಬೇಕು ಎಂದು ಆದೇಶಿಸಿತ್ತು.

Join Whatsapp
Exit mobile version